ಜಿಲ್ಲೆ

ವೈಜ್ಞಾನಿಕ ಜೇನು ಕೃಷಿ ಮಹತ್ವ ಅರಿಯಿರಿ; ರೈತರಿಗೆ ರಾಯಚೂರು ಕೃಷಿ ವಿವಿ ವ್ಯವಸ್ಥಾಪನೆ ಮಂಡಳಿ ಸದಸ್ಯ ಜಿ.ಶ್ರೀಧರ ಕೇಸರಹಟ್ಟಿ ಮನವಿ

ಗಂಗಾವತಿ: ರೈತರು ವೈಜ್ಞಾನಿಕ ಜೇನು ಕೃಷಿಗೆ ಮಹತ್ವ ನೀಡಬೇಕು ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿವಿ ವ್ಯವಸ್ಥಾಪನೆ ಮಂಡಳಿ ಸದಸ್ಯ ಜಿ.ಶ್ರೀಧರ ಕೇಸರಹಟ್ಟಿ ಹೇಳಿದರು.
ನಗರದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಸರ್ಕಾರಿ ಕೃಷಿ ಮಹಾವಿದ್ಯಾಲಯ, ಕೃಷಿ ಸಂಶೋಧನೆ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಗುರುವಾರ ಕಲ್ಯಾಣ ಕರ್ನಾಟಕ ಭಾಗದ ತೋಟಗಾರಿಕೆ ಅಧಿಕಾರಿಗಳಿಗೆ ಏರ್ಪಡಿಸಿದ್ದ ವೈಜ್ಞಾನಿಕ ಜೇನು ಕೃಷಿ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಜೇನು ಕೃಷಿ ಬಗ್ಗೆ ಈ ಭಾಗದಲ್ಲಿ ಸಮರ್ಪಕ ಮಾಹಿತಿಯಿಲ್ಲ. ಇದರಿಂದ ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಿಸಲು ಸಾಧ್ಯವಿದ್ದು, ಜೇನು ತುಪ್ಪದ ಜತೆಗೆ ಉಪ ಉತ್ಪನ್ನಗಳಿಗೂ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ ಎಂದು ತಿಳಿಸಿದರು. ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿ, ಜೇನು ಕೃಷಿಗಾಗಿ ಇಲಾಖೆಯಲ್ಲಿ ಹಲವು ಯೋಜನೆಗಳಿದ್ದು, ರೈತರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.
ಸರ್ಕಾರಿ ಕೃಷಿ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ. ಬದರಿಪ್ರಸಾದ, ಜೇನು ಸಾಕಣೆ, ತುಪ್ಪ, ಮೇಣ ಸಂಗ್ರಹ ಮತ್ತು ಔಷಧೀಯ ಗುಣಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್, ಸಹ ಪ್ರಾಧ್ಯಾಪಕರಾದ ಡಾ.ಎಸ್.ಬಿ. ಗೌಡರ್, ಡಾ.ಸುಜಯ್ ಹುರಳಿ ಸೇರಿ ಕ.ಕ. ಭಾಗದ ತೋಟಗಾರಿಕೆ ಇಲಾಖೆ 25 ಅಧಿಕಾರಿಗಳು ಭಾಗವಹಿಸಿದ್ದರು.