ಕೊಪ್ಪಳ: ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಡಿ.4 ಮತ್ತು 5ರಂದು ಹನುಮಮಾಲೆ ವಿಸರ್ಜನೆಗಾಗಿ ಬೆಟ್ಟಕ್ಕೆ ಬರುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ವ್ಯವಸ್ಥಿತವಾಗಿ ಕಾಯಕ್ರಮ ಸಂಘಟಿಸಲು 14 ಸಮಿತಿ ರಚಿಸಿದ್ದು, ಜವಾಬ್ದಾರಿಯಿಂದ ಕೆಲಸ ಮಾಡಬೇಕು. ನಿಮ್ಮ ಕೆಲಸ ನಿರ್ವಹಣೆ ಕುರಿತು ಎರಡು ದಿನದಲ್ಲಿ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸಬೇಕು. ಒಂದು ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದ್ದು, ಎಲ್ಲರಿಗೂ ಆಹಾರ, ಕುಡಿವ ನೀರು, ವಸತಿ, ಸ್ನಾನಘಟ್ಟ, ವಿದ್ಯುತ್ ದೀಪ ಹಾಗೂ ಇತರ ಸೌಲಭ್ಯ ಕಲ್ಪಿಸಬೇಕು.ಬೆಟ್ಟ ಸಂಪರ್ಕಿಸುವ ರಸ್ತೆಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಬೇಕು. ಅಲ್ಲಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಸೂಚನಾ ಫಲಕ ಅಳವಡಿಸಬೇಕು. ಸಚಿವ, ಸಂಸದರು, ಶಾಸಕರು ಬರುವ ನಿರೀಕ್ಷೆ ಇದ್ದು ಗಣ್ಯರಿಗೆ ಪ್ರತ್ಯೇಕ ರಸ್ತೆ, ಭದ್ರತೆ ಒದಗಿಸಲು ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದರು.
ಹೆಚ್ಚಿನ ಜನರು ಏಕಕಾಲಕ್ಕೆ ಸೇರುವುದರಿಂದ ಅಲ್ಲಲ್ಲಿ ಊಟದ ಕೌಂಟರ್, ನೀರಿನ ಟ್ಯಾಂಕರ್ ನಿಲ್ಲಿಸಬೇಕು. ಆಹಾರ ಗುಣಮಟ್ಟ ಪರಿಶೀಲನಾ ತಂಡ ಪ್ರಸಾದ, ಆಹಾರ ಪರಿಶೀಲನೆ ನಡೆಸಬೇಕು. ಅಂಜನಾದ್ರಿ ಸಂಪರ್ಕಿಸುವ ಮಾರ್ಗವಾಗಿ ಎರಡು ದಿನ ಹೆಚ್ಚುವರಿ ಬಸ್ ಬಿಡಬೇಕು. ಆರೋಗ್ಯ ತುರ್ತು ಪರಿಸ್ಥಿತಿ ನಿವಾರಣೆಗೆ ಗಂಗಾವತಿ, ಆನೆಗೊಂದಿ, ಹುಲಿಗಿ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಸಿಬ್ಬಂದಿ ನಿಯೋಜಿಸಬೇಕು. ಬೆಟ್ಟದಲ್ಲೂ ಒಂದೆರಡು ಕಡೆ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭಿಸಬೇಕು. ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ನದಿ ದಡದಲ್ಲಿ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ಸಿಬ್ಬಂದಿ ನಿಯೋಜಿಸಬೇಕು. ಕಾಡು ಪ್ರಾಣಿಗಳ ಭೀತಿ ಇರುವ ಕಾರಣ ಕೂಂಬಿಂಗ್‌ಗಾಗಿ ಗದಗನ ರ‌್ಯಾಪಿಡ್ ಆಕ್ಷನ್ ಫೋರ್ಸ್ ಬಳಸಿಕೊಳ್ಳಲು ನಿರ್ಧರಿಸಿದ್ದು, ಅರಣ್ಯಾಧಿಕಾರಿಗಳು ತಂಡಕ್ಕೆ ಸಹಕಾರ ನಿಡುವಂತೆ ತಿಳಿಸಿದರು.
ಜಿಪಂ ಸಿಇಒ ಫೌಜಿಯಾ ತರನ್ನುಮ್ ಮಾತನಾಡಿ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗ್ರಾಪಂ ಕಾರ್ಮಿಕರೊಂದಿಗೆ ನಗರ, ಸ್ಥಳೀಯ ಸಂಸ್ಥೆ ಸ್ವಚ್ಛತಾ ಸಿಬ್ಬಂದಿಯನ್ನು ಬಳಸಿಕೊಳ್ಳಬೇಕು. ಕಸ ವಿಲೇವಾರಿಗೆ ಅಗತ್ಯ ಪ್ರಮಾಣದ ವಾಹನಗಳನ್ನು ಪಡೆದುಕೊಳ್ಳಬೇಕು. ಶುದ್ಧ ಕುಡಿವ ನೀರನ್ನು ಒದಗಿಸಬೇಕು. ನೀರು ಹಾಗೂ ಆಹಾರದಲ್ಲಿ ಯಾವುದೇ ವ್ಯತ್ಯಯವಾಗದಂತೆ ಎಚ್ಚರವಹಿಸುವಂತೆ ಸಲಹೆ ನೀಡಿದರು. ಎಸ್ಪಿ ಅರುಣಾಂಗ್ಷು ಗಿರಿ, ಎಡಿಸಿ ಸಾವಿತ್ರಿ ಬಿ.ಕಡಿ, ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ, ಡಿಯುಡಿಸಿ ಪಿಡಿ ಕಾವ್ಯಾರಾಣಿ ಮತ್ತು ವಿವಿಧ ಸಮಿತಿಗಳ ಅಧಿಕಾರಿಗಳಿದ್ದರು.
ಸಮಿತಿಗಳ ಕೆಲಸ ಅಚ್ಚುಕಟ್ಟಾಗಿರಲಿ: ಲಕ್ಷಾಂತರ ಜನ ಸೆರುವುದರಿಂದ ಭದ್ರತೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ಅಗತ್ಯವಿದ್ದಲ್ಲಿ ಅಕ್ಕ-ಪಕ್ಕದ ಜಿಲ್ಲೆಗಳ ಪೊಲೀಸ್ ಹಾಗೂ ಗೃಹರಕ್ಷಕದಳ ಸಿಬ್ಬಂದಿ ಸೇವೆ ಪಡೆಯಬಹುದು. ಆಹಾರ ವಿತರಣೆ, ಮಾಹಿತಿಗಾಗಿ ಹೆಲ್ಪ್‌ಡೆಸ್ಕ್ ನಿರ್ವಹಣೆ ಇತರ ಕೆಲಸಗಳಿಗೆ ಸ್ವಯಂಸೇವಾ ಸಂಘಗಳ ನೆರವು ಸಹ ತೆಗೆದುಕೊಳ್ಳಬಹುದು. ಆಯಾ ಸಮಿತಿಗಳು ಅಚ್ಚುಕಟ್ಟಾಗಿ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಡಿಸಿ ಎಚ್ಚರಿಸಿದರು.