ಕೊಪ್ಪಳ: ಗಂಗಾವತಿ ನಗರದ ಜಯನಗರದಲ್ಲಿನ ಪಪಂ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಮೂಲಸೌಕರ್ಯ ಕಲ್ಪಿಸಲು ಒತ್ತಾಯಿಸಿ ಎಡಿಸಿ ಎಂ.ಪಿ.ಮಾರುತಿಗೆ ಎಸ್‌ಎಫ್‌ಐ ಸಂಘಟನೆ ಪದಾಧಿಕಾರಿಗಳು ಶನಿವಾರ ಮನವಿ ಸಲ್ಲಿಸಿದರು.
ಹಾಸ್ಟೆಲ್‌ನಲ್ಲಿ 240ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಆದರೆ, ಕೊಠಡಿ, ಶೌಚಗೃಹ ವ್ಯವಸ್ಥೆ ಸರಿಯಿಲ್ಲ. ವಿದ್ಯಾರ್ಥಿಗಳಿಗೆ ಸರಿಯಾಗಿ ಮಲಗಲೂ ಜಾಗವಿಲ್ಲ. ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ದಾಕ್ಷಾಯಣಿ ಪೊಲೀಸರಿಂದ ವಿದ್ಯಾರ್ಥಿಗಳಿಗೆ ಧಮಕಿ ಹಾಕಿಸುತ್ತಾರೆಂಬ ಆರೋಪ ಸುಳ್ಳು. ಕೂಡಲೇ ಹಾಸ್ಟೆಲ್‌ಗೆ ಮೂಲ ಸೌಕರ್ಯ ಕಲ್ಪಿಸಬೇಕು. ಸ್ವಂತ ಕಟ್ಟಡಕ್ಕೆ ಹಾಸ್ಟೆಲ್‌ಅನ್ನು ಸ್ಥಳಾಂತರಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿ, ಶೌಚಗೃಹಗಳನ್ನು ಹೆಚ್ಚಿಸಬೇಕು. ತಾಲೂಕಾಧಿಕಾರಿ ದಾಕ್ಷಾಯಣಿ ಅವರನ್ನು ಮುಂದುವರೆಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಸುಬಾನ್ ಸೈಯದ್, ತಾಲೂಕಾಧ್ಯಕ್ಷ ಗ್ಯಾನೇಶ ಕಡಗದ, ಕಾರ್ಯದರ್ಶಿ ಬಾಳಪ್ಪ ಹುಲಿಹೈದರ್, ಶಿವಕುಮಾರ್ ಇತರರಿದ್ದರು.