ಜಿಲ್ಲೆ

ಸಚಿವ ಹಾಲಪ್ಪ ಆಚಾರ್ ವಿರುದ್ಧ ವಾಮಾಚಾರ

ಕುರುವತ್ತಿ ಶ್ರೀಕಾಂತಪ್ಪ

ಕೊಪ್ಪಳ: ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಕಸರತ್ತುಗಳು, ಪಟ್ಟುಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ. ಆದರೆ, ಯಲಬುರ್ಗಾದಲ್ಲಿ ಸಚಿವ ಹಾಲಪ್ಪ ಆಚಾರ್ ಹಾಗೂ ಗೌರಾ ಬಸವರಾಜ ವಿರುದ್ಧ ಅಪರಚಿತರು ಶನಿವಾರ ವಾಮಾಚಾರ ನಡೆಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದು ಕಾಂಗ್ರೆಸ್‌ನವರ ಕೃತ್ಯವೆಂದು ಬಿಜೆಪಿ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.

ಜಿಲ್ಲೆಯ ಉಳಿದ ಕ್ಷೇತ್ರಗಳಿಗಿಂತ ಯಲಬುರ್ಗಾದಲ್ಲಿ ಹಾಲಿ-ಮಾಜಿ ಸಚಿವರ ರಾಜಕೀಯ ಜಿದ್ದು ತೀವ್ರತೆ ಪಡೆದಿದೆ. ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಗಳು ಬಳಕೆಯಾಗುತ್ತಿವೆ. ಈ ನಡುವೆ, ‘ಸಚಿವ ಹಾಲಪ್ಪ ಆಚಾರ್ ಹಾಗೂ ಅವರ ಅಳಿಯ ಗೌರಾ ಬಸವರಾಜ ನಾಶವಾಗಲಿ, ಚುನಾವಣೆಯಲ್ಲಿ ಸೋಲಲಿ’ ಎಂದು ತಾಮ್ರಪಟಗಳಲ್ಲಿ ಬರೆದು, ವಿವಿಧ ಮಂತ್ರಗಳನ್ನು ಸೇರಿಸುವ ಮೂಲಕ ವಾಮಾಚಾರ ಮಾಡಿಸಲಾಗಿದೆ. ಕ್ಷೇತ್ರದ ನಿಲೋಗಲ್, ಮಲಕಸಮುದ್ರ ಮತ್ತಿತರ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ರಸ್ತೆ ಹಾಗೂ ಕೆರೆ ತುಂಬಿಸುವ ಯೋಜನೆಯ ಜಾಕ್‌ವೆಲ್‌ಗಳ ಬಳಿ ತೆಂಗಿನ ಕಾಯಿ, ತಾಮ್ರಪಟ, ವಿಭೂತಿ, ಕುಂಕುಮ, ಅರಿಶಿಣ ಹಾಕಿ ಪೂಜೆ ಸಲ್ಲಿಸಲಾಗಿದೆ. ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದನ್ನು ಗಮನಿಸಿದ್ದು, ತೆರೆದು ನೋಡಿದಾಗ ಸಚಿವರ ವಿರುದ್ಧ ವಾಮಾಚಾರ ಎಸಗಿರುವುದು ಬಯಲಾಗಿದೆ.

ಕಾಂಗ್ರೆಸ್ ವಿರೋಧಿಗಳು ರಾಜಮಾರ್ಗದಲ್ಲಿ ಚುನಾವಣೆ ಎದುರಿಸಿ ಹೋರಾಡಬೇಕು. ಕೈಲಾಗದೆ, ವಾಮಾಚಾರ ಮಾಡಿಸುವುದು ಅಥವಾ ಅಡ್ಡ ಮಾರ್ಗ ಹಿಡಿಯುವುದು ಸರಿಯಲ್ಲ. ಇದರಿಂದ ಹಾಲಪ್ಪ ಮತ್ತವರ ಕುಟುಂಬಕ್ಕೆ ಯಾವುದೇ ತೊಂದರೆಯಾಗುವುದಿಲ್ಲವೆಂದು ಆಚಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಕೈ-ಕಮಲ ನಾಯಕರ ರಾಜಕೀಯ ಕಚ್ಚಾಟಕ್ಕೆ ವೇದಿಕೆ ಕಲ್ಪಿಸಿದೆ.