ಕೊಪ್ಪಳ: ಜಿಲ್ಲೆಯ ಎಲ್ಲ ಪತ್ರಿಕಾ ವಿತರಕರು ಗುರುತಿನ ಚೀಟಿ ಮಾಡಿಸಿಕೊಳ್ಳಿ. ಇದರಿಂದ ಅನುಕೂಲವಾಗಲಿದೆ ಎಂದು ಕರ್ನಾಟಕ ಪತ್ರಿಕಾ ವಿತರಕರ ಕ್ಷೆಮಾಭಿವೃದ್ಧಿ ಸಂದ ಅಧ್ಯಕ್ಷ ಶಂಕರ ಕುದುರಿಮೋತಿ ಹೇಳಿದರು.
ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘದ ಜಿಲ್ಲಾ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪತ್ರಿಕೆ ಹಂಚುವವರ ನೆರವಿಗೆ ಸರ್ಕಾರವಾಗಲಿ ಅಥವಾ ಪತ್ರಿಕೆ ಮಾಲೀಕರು ಧಾವಿಸುವುದಿಲ್ಲ. ಹೀಗಾಗಿ ನಾವೇ ಸಂಘಟಿತರಾಗಿ ನಮ್ಮ ರಕ್ಷಣೆ ಮಾಡಿಕೊಳ್ಳಬೇಕಿದೆ. ಎಲ್ಲರು ಗುರುತಿನ ಚೀಟಿ ಮಾಡಿಸಿಕೊಳ್ಳಿ. ದುರ್ಘಟನೆ ಸಂಭವಿಸಿದಾಗ ನೆರವಿಗೆ ಬರಲಿದೆ.
ಇದನ್ನೂ ಓದಿ: ತಾಲೂಕು ಪತ್ರಿಕಾ ಪ್ರತಿನಿಧಿಗಳ ಸಂಘ ರಚನೆ
ಅಪಘಾತವಾದಲ್ಲಿ 80 ಸಾವಿರ ರೂ., ಸಾವಾದಲ್ಲಿ 4 ಲಕ್ಷ ರೂ. ಪರಿಹಾರ ಪಡೆಯಲು ಸಾಧ್ಯವಿದೆ. ನಮ್ಮದು ಜಾತಿ, ಪಕ್ಷಾತೀತ ಸಂಘಟನೆ. ತಾಲೂಕುವಾರು ಘಟಕಗಳನ್ನು ಆರಂಭಿಸಿ ಸಂಘಟನೆ ಬಲಗೊಳಿಸುವಂತೆ ತಿಳಿಸಿದರು.
ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ, ಸತತ ಚಟುವಟಿಕೆಯಿಂದ ಇದ್ದರೆ ಸಂಘಟನೆ ಬಲವಾಗಲಿದೆ. ಜಿಲ್ಲಾ ಘಟಕದಿಂದ ಬೇಡಿಕೆಗಳನ್ನು ರಾಜ್ಯ ಘಟಕಕ್ಕೆ ಕಳಿಸಿದಲ್ಲಿ ಅವರು, ಸಂಬಂಧಿಸಿದ ಸಚಿವರು, ಸರ್ಕಾರದ ಗಮನಕ್ಕೆ ತರಲಿದ್ದಾರೆ. ಪತ್ರಿಕಾ ವಿತರಕರ ಕಲ್ಯಾಣ ಮಂಡಳಿ ರಚಿಸಬೇಕು.
ಈ ಮೂಲಕ ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತು ಹಣದಲ್ಲಿ ಶೇ.1ರಷ್ಟು ಸೆಸ್ ಸಂಗ್ರಹಿಸಿ ಮಂಡಳಿಗೆ ಜಮಾ ಮಾಡಬೇಕು. ಕಾರ್ಮಿಕ ಮಂಡಳಿ ಮಾದರಿಯಲ್ಲಿ ಯೋಜನೆ ರೂಪಿಸಬೇಕು ಎಂದರು.
ಸಂಘದ ಗೌರವ ಅಧ್ಯಕ್ಷ ವಿರೂಪಾಕ್ಷಪ್ಪ ಮುರಳಿ ಮಾತನಾಡಿ, ಪತ್ರಿಕೆ ಹಾಕುವುದರಿಂದ ಜೀವನ ರೂಪಿಸಿಕೊಳ್ಳಬಹುದು. ನಮ್ಮಲ್ಲಿ ಪತ್ರಿಕೆ ಹಾಕುತ್ತಿದ್ದವರು ತಹಸೀಲ್ದಾರ್, ಪಿಎಸ್‌ಐ, ಉಪನ್ಯಾಸಕರಾಗಿದ್ದಾರೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಗವಿರಾಜ್ ಕಂದಾರಿ, ಎಲ್ಲರೂ ಹಣ ಜಮಾ ಮಾಡಿ ಸಂಘ ಬಲಪಡಿಸೋಣ. ಇದರಿಂದ ನಮ್ಮ ವಿತರಕರಿಗೆ ಸಮಸ್ಯೆ ಆದಲ್ಲಿ ನೆರವಾಗಲು ಅನುಕೂಲವಾಗಲಿದೆ ಎಂದರು.
ರಾಜ್ಯ ಸಹ ಕಾರ್ಯದರ್ಶಿ ಮಂಜುನಾಥ ಕನಬೂರ, ಜಿಲ್ಲಾ ಕಾರ್ಯದರ್ಶಿ ಮಹೆಬೂಬ್ ಗಂಗಾವತಿ, ನಾಗರಾಜ ವಂಕಿ, ಮಹಾದೇವಪ್ಪ ಹೂಗಾರ, ವಸಂತ ಶಾವಿ, ಕನಾಕಚಲ ಇಲ್ಲೂರ, ಸಿದ್ದರಾಮಪ್ಪ ಗೌಡ, ಮಂಜುನಾಥ ಟಪಾಲ್, ರವೀಂದ್ರ ಕಲಾಲ್ ಇತರರಿದ್ದರು.