ಕೊಪ್ಪಳ: ಸರ್ಕಾರ ಕೊಪ್ಪಳ ವಿವಿ ಮುಚ್ಚುವ ನಿರ್ಧಾರ ಮಾಡಿದ್ದನ್ನು ಖಂಡಿಸಿ ಎಬಿವಿಪಿ ಸಂಚಾಲಕರು ಬುಧವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶ. ಹಲವು ವರ್ಷಗಳ ಹೋರಾಟ ಲವಾಗಿ ಕಳೆದೆರೆಡು ವರ್ಷದ ಹಿಂದೆ ಕೊಪ್ಪಳಕ್ಕೆ ವಿವಿ ಮಂಜೂರಾಗಿದೆ. ಆದರೆ, ಆರ್ಥಿಕ ನಷ್ಟ ಕಾರಣ ನೀಡಿ ಸರ್ಕಾರ ವಿವಿ ಮುಚ್ಚಲು ಮುಂದಾಗಿದೆ. ಇದು ಶಿಕ್ಷಣ ವಿರೋಧಿ ನೀತಿ. ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವ ನಡೆ ಖಂಡನೀಯ. ಈ ಭಾಗದ ಮಕ್ಕಳು ಉನ್ನತ ಶಿಕ್ಷಣ ಕಲಿಯಲು ವಿವಿ ನೆರವಾಗಿದೆ. ಅದನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಆದರೆ, ಹಣಕಾಸು ನೆಪ ನೀಡಿ ಮುಚ್ಚುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ಹೊಸ ವಿವಿಗಳನ್ನು ಮುಚ್ಚಬಾರದು. ತಕ್ಷಣ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಕೊಪ್ಪಳ ವಿವಿಯನ್ನು ಮುಂದುವರಿಸಬೇಕು. ಅನುದಾನ ಒದಗಿಸಿ ಬಲಪಡಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಸಲಾಗುವುದೆಂದು ಎಚ್ಚರಿಸಿದರು. ಪ್ರತಿಭಟನೆ ವಿಷಯ ತಿಳಿದು ಬಿಜೆಪಿ ನಾಯಕರು ಆಗಮಿಸಿ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಪ್ರಮುಖರಾದ ಮಹಾಂತೇಶ ಪಾಟೀಲ್ ಮೈನಳ್ಳಿ, ಚಂದ್ರು ಕವಲೂರು, ಎಬಿವಿಪಿ ಜಿಲ್ಲಾ ಸಂಚಾಲಕ ಶಶಾಂಕ ಪಾಟೀಲ್, ಸಂಚಾಲಕರಾದ ಹಮ್ಮಿಗೇಶ, ಕೃಷ್ಣಾ, ವಿದ್ಯಾರ್ಥಿಗಳಾದ ಅರುಣ್ ಹೂಗಾರ, ಆದಿತ್ಯ, ಮನೋಹರ, ಲಕ್ಷ್ಮಣ, ಲೋಹಿತ್, ರಾಧಿಕಾ, ಸುಮಂಗಲಾ, ರೇಣುಕಾ, ರೇಖಾ, ಸಂಜನಾ ಇತರರಿದ್ದರು.