ಕೊಪ್ಪಳ: ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಬಹುಕಾಲ ಅಧಿಕಾರ ನಡೆಸಿದೆ. ಮುಂದೆ ಅವರಿಗೆ ಅಧಿಕಾರ ಸಿಗುವುದಿಲ್ಲ. ಹೀಗಿರುವಾಗ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಿಎಂ ಆಗುವ ಬಗ್ಗೆ ಮಾತನಾಡುತ್ತಿದ್ದಾರೆಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಲೇವಡಿ ಮಾಡಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದರು. ಚುನಾವಣೆ ಪೂರ್ವ ಸಮೀಕ್ಷೆಗಳಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ ಎನ್ನುತ್ತಿದ್ದಾರೆ. ಹಿಂದೆ ಉತ್ತರ ಪ್ರದೇಶದಲ್ಲೂ ಹೀಗೆ ವರದಿ ಬಂದಿದ್ದವು. ಆದರೆ, ಫಲಿತಾಂಶ ಏನಾಯಿತೆಂದು ಪ್ರಶ್ನಿಸಿದರು. ಅಗತ್ಯ ವಸ್ತುಗಳ ಮೇಲೆ ತೆರಿಗೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿ, ಅಭಿವೃದ್ಧಿ ದೃಷ್ಟಿಯಿಂದ ಕೆಲವೊಮ್ಮೆ ಅನಿವಾರ್ಯವಾಗಿ ತೆರಿಗೆ ಹೇರಬೇಕಾಗುತ್ತದೆ. ಕೆಲ ವಸ್ತುಗಳಿಗೆ ತೆರಿಗೆ ವಿನಾಯತಿ ನೀಡಲಾಗಿದೆ. ಅದರ ಬಗ್ಗೆ ಯಾರೂ ಗಮನಿಸುತ್ತಿಲ್ಲ. ವಿರೋಧ ಪಕ್ಷದ ಕೆಲಸ ವಿರೋಧಿಸುವುದು. ಅವರು ಪ್ರತಿಭಟನೆ ಮಾಡಲಿ ಎಂದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಸಂಘಟನಾ ಚತುರ. ಅವರ ಬಗ್ಗೆ ಕಾಂಗ್ರೆಸ್‌ಗೆ ಭಯವಿದೆ. ಹೀಗಾಗಿ ಅವರ ಬಗ್ಗೆ ಕೈ ನಾಯಕರು ಹೆಚ್ಚು ಮಾತನಾಡುತ್ತಾರೆಂದು ಟಾಂಗ್ ನೀಡಿದರು. ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಕೊರತೆಯಾಗುತ್ತಿದೆ. ಮಳೆಯಾಗಿದ್ದು, ಬಿತ್ತನೆ ಹೆಚ್ಚಳವಾದ ಕಾರಣ ಸಮಸ್ಯೆಯಾಗಿದೆ. ಸಹಕಾರ ಸಂಘಗಳಿಗೆ ಆದ್ಯತೆ ಮೇರೆಗೆ ಗೊಬ್ಬರ ಪೂರೈಸಿ ಪರಿಹಾರ ಕಂಡುಕೊಳ್ಳುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಲಾಗುವುದೆಂದು ತಿಳಿಸಿದರು.