ಜಿಲ್ಲೆ

ವಿವಿಧ ಹುದ್ದೆಗಳ ನೇಮಕಾತಿಗೆ ತಡೆಯನ್ನು ಖಂಡಿಸಿದ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಪುರ

ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮಂಡಳಿಗೆ ಅನುದಾನ ಕಡಿತಗೊಳಿಸಿದ್ದು, ಈ ಭಾಗದ ನೇಮಕಾತಿಗೆ ತಡೆ ನೀಡಿರುವುದು ಸರಿಯಲ್ಲ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಪುರ ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿ ಸೋಮವಾರ ಮಾತನಾಡಿದರು. 2020-21ನೇ ಸಾಲಿನ ಅನುದಾನ ಬಿಡುಗಡೆಯಾಗಿಲ್ಲ. ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಈ ಭಾಗದ ಅಭಿವೃದ್ಧಿಗೆ 2500 ಕೋಟಿ ರೂ. ಅನುದಾನ ಘೋಷಿಸಿದ್ದರು. ಅದೂ ಕೂಡ ಬಂದಿಲ್ಲ. ಸಿಎಂ ಬಿಎಸ್‌ವೈ ಘೋಷಿಸಿದ 1500 ಕೋಟಿ ರೂ. ಸಹ ಬಿಡುಗಡೆಯಾಗಿಲ್ಲ. ಕರೊನಾ ನೆಪವೊಡ್ಡಿ ಅನುದಾನ ಕಡಿತಗೊಳಿಸುವುದು ಸರಿಯಲ್ಲ.

ಹೀಗಾಗಿ ನಮ್ಮ ಭಾಗದ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿವೆ. ಮಂಡಳಿಗೆ ಅಧ್ಯಕ್ಷರನ್ನು ನೇಮಿಸಿದ್ದಾರೆ. ಆದರೆ, ಸದಸ್ಯರು ಸೇರಿ ಪೂರ್ಣ ಪ್ರಮಾಣದಲ್ಲಿ ನೇಮಕವಾಗಿಲ್ಲ. ಕಕ ಭಾಗದ ಜಿಲ್ಲೆಗ ಉಸ್ತುವಾರಿ ಸಚಿವರು ಮಂಡಳಿ ಸದಸ್ಯರಾಗಿರುತ್ತಾರೆ. ಒಬ್ಬ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸಿದರೆ ಹೇಗೆ ? ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿಎಂ ಒಮ್ಮೆಯೂ ಮಂಡಳಿ ಸಭೆ ನಡೆಸಿಲ್ಲ ಎಂದರು.

ಡಾ.ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ಪ್ರದೇಶಗಳ ಪೈಕಿ ಕಕ ಭಾಗದ ತಾಲೂಕುಗಳೇ ಅಧಿಕವಾಗಿವೆ. ಹೀಗಾಗಿ ಮಂಡಳಿ ಅನುದಾನವನ್ನು ಜನಸಂಖ್ಯೆ ಆಧಾರದಲ್ಲಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ನೇಮಕಾತಿ ತಡೆ ಸರಿಯಲ್ಲ: ನಮ್ಮ ಭಾಗದ ನೇಮಕಾತಿ ತಡೆಗೆ ಯಾವುದೇ ಆರ್ಥಿಕ ನಿಬಂಧನೆಗಳಿಲ್ಲ. ರಾಜ್ಯದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಪೈಕಿ ಶೇ.40 ಕಕ ಭಾಗದಲ್ಲಿವೆ. ಶಿಕ್ಷಣ, ಕಂದಾಯ ಸೇರಿ ವಿವಿಧ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಹೀಗಾಗಿ ಮಂಡಳಿಯಲ್ಲಿಯೆ ಪ್ರತ್ಯೆಕ ತಾಂತ್ರಿಕ ಕೋಶ ಆರಂಭಿಸಿ, ಕಾಮಗಾರಿ ಪ್ರಗತಿ ಹಾಗೂ ನೇಮಕಾತಿ ಪ್ರಕ್ರಿಯೆ ನಡೆಸಬೇಕೆಂದು ಶಾಸಕ ಬಯ್ಯಪುರ ಆಗ್ರಹಿಸಿದರು.