ಜಿಲ್ಲೆ

ಬಂಕಾಪುರ ತೋಳ ಧಾಮಕ್ಕೆ ಅಸ್ತು: ರಾಜ್ಯದ ಮೊದಲ ವೂಲ್ಫ್ ಸಂರಕ್ಷಣಾ ಪ್ರದೇಶ

ವಿ.ಕೆ.ರವೀಂದ್ರ ಕೊಪ್ಪಳ

ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಬಂಕಾಪುರ ಮೀಸಲು ಅರಣ್ಯವನ್ನು ತೋಳ ಸಂರಕ್ಷಣಾ ಪ್ರದೇಶವೆಂದು ಸರ್ಕಾರ ಘೋಷಿಸಿದ್ದು, ರಾಜ್ಯದ ಮೊದಲ ತೋಳ ಸಂರಕ್ಷಿತ ಪ್ರದೇಶವಾಗಲಿದೆ. ಜತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ.

ಜಿಲ್ಲೆಯಲ್ಲಿ ಹೆಚ್ಚಾಗಿ ಕುರುಚಲು ಕಾಡುಗಳಿದ್ದು, ಬೆಟ್ಟ-ಗುಡ್ಡಗಳಿಂದ ಕೂಡಿದ ಅರಣ್ಯ ಪ್ರದೇಶವಿದೆ. ಕರಡಿ, ಚಿರತೆ, ತೋಳ, ನರಿ, ಮೊಲ, ಜಿಂಕೆ, ಕೃಷ್ಣಮೃಗ, ನವಿಲು, ಹಾವುಗಳು ಮುಂತಾದ ಪ್ರಾಣಿಗಳಿವೆ. ಆಧುನಿಕತೆ ಬೆಳೆದಂತೆ ಅರಣ್ಯದಂಚಿನಲ್ಲಿ ಕಾಡು ಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚುತ್ತಿವೆ. ಕುಕನೂರು ಭಾಗದಲ್ಲಿ ಜಿಂಕೆವನ ಘೋಷಣೆಯಾದರೂ ಅನುಷ್ಠಾನವಾಗದೇ ನನೆಗುದಿಗೆ ಬಿದ್ದಿದೆ. ಕೊಪ್ಪಳ ತಾಲೂಕಿನ ಹಿರೇಸೂಳಿಕೇರಿ, ಹಾಸಗಲ್, ಮೆತಗಲ್ ಭಾಗದಲ್ಲಿ ಕರಡಿ ಹಾವಳಿ ಅಧಿಕವಿದ್ದರೆ, ಗಂಗಾವತಿ ಭಾಗದಲ್ಲಿ ಚಿರತೆಗಳು ಹೆಚ್ಚಾಗಿವೆ. ಹೀಗಾಗಿ ಈ ಭಾಗವನ್ನು ಕರಡಿ ಸಂರಕ್ಷಿತ ಪ್ರದೇಶವೆಂದು ಘೋಷಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಕನಕಗಿರಿ ತಾಲೂಕಿನ ಬಂಕಾಪುರ ಮೀಸಲು ಅರಣ್ಯದಲ್ಲಿ ತೋಳಗಳು ಅಧಿಕ ಸಂಖ್ಯೆಯಲ್ಲಿದ್ದು, ಇದನ್ನು ತೋಳ ಸಂರಕ್ಷಿತ ಪ್ರದೇಶವಾಗಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಕಳೆದ ಸಚಿವ ಸಂಪುಟ ಸಭೆಯಲ್ಲಿ ಶ್ರೀಗಂಧ ನೀತಿಗೆ ಅಸ್ತು ಎಂದಿದ್ದು, ಅದರೊಂದಿಗೆ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ 6 ಮೀಸಲು ಸಂರಕ್ಷಣಾ ಪ್ರದೇಶ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ಅದರಲ್ಲಿ ಬಂಕಾಪುರ ತೋಳ ಸಂರಕ್ಷಣಾ ಪ್ರದೇಶವೂ ಒಂದಾಗಿದೆ. ಕನಕಗಿರಿಯಿಂದ 5 ಕಿಮೀ ದೂರ ಇರುವ ಬಂಕಾಪುರ, ಸುಳೇಕಲ್, ಮಲ್ಲಾಪುರ ಅರಣ್ಯವ್ಯಾಪ್ತಿಯ 332.69 ಹೆಕ್ಟೇರ್ ಪ್ರದೇಶದಲ್ಲಿ ತೋಳಗಳು ಅಧಿಕ ಸಂಖ್ಯೆಯಲ್ಲಿವೆ. ಈ ಪ್ರದೇಶ ಕುರುಚಲು ಕಾಡುಗಳಿಂದ ಕೂಡಿದೆ. ವಿವಿಧ ಸಸ್ತನಿಗಳು, ಸರಿಸೃಪಗಳು, ಹೈನಾ, ಕರಡಿ, ಚಿರತೆ, ಮೊಲ, ಮುಳ್ಳುಹಂದಿ, ಕಾಡುಹಂದಿ, ನರಿ, ಆಮೆ, ಮಿಂಚುಳ್ಳಿ, ಮೈನಾ, ರಣಹದ್ದು, ನವಿಲು, 7 ವರ್ಗಕ್ಕೆ ಸೇರಿದ 67 ಜಾತಿಯ ಚಿಟ್ಟೆಗಳು ವಾಸಸ್ಥಾನವಾಗಿದೆ. ಬೆಟ್ಟ, ಗುಡ್ಡ, ಗುಹೆ, ನೀರಿನ ಒರತೆಗಳು, ಕಾಡು ಮರ, ಬಳ್ಳಿ, ಹಣ್ಣಿನ ಗಿಡಗಳಿಂದ ಕೂಡಿದೆ.

ಈ ಪ್ರದೇಶದಲ್ಲಿ ವಾರ್ಷಿಕ 600-700 ಮಿಮೀ ಮಳೆ ಬೀಳುತ್ತದೆ. ಬಿಸಿಲು, ಚಳಿ ವಾತಾವರಣ ಅಧಿಕವಾಗಿರುತ್ತದೆ. ತೋಳಗಳ ವಾಸಕ್ಕೆ ಪೂರಕವಾಗಿದ್ದು, ಉಳಿದೆಲ್ಲ ಪ್ರಾಣಿಗಳಿಗಿಂತ ತೋಳಗಳು ಅಧಿಕ ಸಂಖ್ಯೆಯಲ್ಲಿವೆ. ಇದು ಮೀಸಲು ಅರಣ್ಯವಾಗಿದ್ದು, ಹೀಗಾಗಿ ಪ್ರದೇಶವನ್ನು ತೋಳ ರಕ್ಷಿತ ಪ್ರದೇಶವೆಂದು ಘೋಷಿಸುವಂತೆ ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತೋಳಗಳ ಚಲನವಲನ ಖಚಿತಪಡಿಸಿಕೊಂಡಿದ್ದಾರೆ. ಖಾಸಗಿ ಸಂಸ್ಥೆಗಳು ತೋಳಗಳ ಬಗ್ಗೆ ಅಧ್ಯಯನಕ್ಕೆ ಇರಿಸಿದ್ದ ಕ್ಯಾಮರಾಗಳಲ್ಲಿ ತೋಳಗಳು ಮರಿಗಳ ಸಮೇತ ಕಾಣಿಸಿಕೊಂಡಿದ್ದು, ಸಂತಾನೋತ್ಪತ್ತಿಗೆ ಸೂಕ್ತ ಪ್ರದೇಶವಾಗಿದೆ. ರಾಜ್ಯದ ಮೊದಲ ತೋಳ ರಕ್ಷಿತ ಪ್ರದೇಶ ಇದಾಗಲಿದೆ. ಬಂಕಾಪುರದ ಒಟ್ಟು 922 ಹೆಕ್ಟೇರ್ ಅರಣ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ 2ನೇ ವಿಭಾಗವನ್ನು ತೋಳ ಸಂರಕ್ಷಣಾ ವಲಯವೆಂದು ಘೋಷಿಸಲು ಸಂಪುಟ ಅನುಮೋದನೆ ನೀಡಿದ್ದು, ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗಲಿದೆ.

73.95 ಕೋಟಿ ರೂ. ಅವಶ್ಯ: ಐತಿಹಾಸಿಕ ಕನಕಗಿರಿ ಪಟ್ಟಣದಿಂದ ಬಂಕಾಪುರ ಕೇವಲ 5 ಕಿಮೀ ದೂರವಿದೆ. ಗಂಗಾವತಿಯಿಂದ 13 ಕಿಮೀ, ಕೊಪ್ಪಳದಿಂದ 41 ಕಿಮೀ ದೂರವಿದೆ. ಹಂಪಿ, ಅಂಜನಾದ್ರಿ, ಆನೆಗೊಂದಿ ಮುಂತಾದ ಪ್ರವಾಸಿ ತಾಣಗಳು ಹತ್ತಿರವಾಗಲಿವೆ. ಹೀಗಾಗಿ ತೋಳ ರಕ್ಷಿತ ಪ್ರದೇಶವೂ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಲಿದೆ. ಮಾನವ-ಪ್ರಾಣಿ ಸಂಘರ್ಷ ತಡೆಗೆ ಅನುಕೂಲವಾಗಲಿದೆ. ಗಡಿ ಗುರುತು, ಚೆಕ್‌ಡ್ಯಾಂ ನಿರ್ಮಾಣ, ಅರಣ್ಯ ಬೆಳವಣಿಗೆ, ಇತರ ಅಭಿವೃದ್ಧಿಗೆ 73.95 ಕೋಟಿ ರೂ. ಅನುದಾನ ಅವಶ್ಯವೆಂದು ಪ್ರಸ್ತಾವನೆಯಲ್ಲಿ ಕೋರಿಕೆ ಸಲ್ಲಿಸಲಾಗಿದೆ. ಸದ್ಯ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದ್ದು, ಮುಂದಿನ ಪ್ರಕ್ರಿಯೆಗಳು ಜರುಗಬೇಕಿದೆ.

ಗೊಂದಲದಲ್ಲಿ ಕರಡಿಧಾಮ: ಕೊಪ್ಪಳ ತಾಲೂಕಿನ ಹಿರೇಸೂಳಿಕೇರಿ, ಚಿಕ್ಕ ಸೂಳಿಕೇರಿ, ಹಾಸಗಲ್ ಇನ್ನಿತರ ಪ್ರದೇಶಗಳಲ್ಲಿ ಕರಡಿಗಳು ಅಧಿಕ ಸಂಖ್ಯೆಯಲ್ಲಿವೆ. ಹೀಗಾಗಿ ಇದನ್ನು ಕರಡಿ, ಚಿರತೆ ಸಂರಕ್ಷಿತ ಪ್ರದೇಶವೆಂದು ಘೋಷಿಸುವಂತೆ ಅರಣ್ಯಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಸಾವಿರ ಎಕರೆ ಪರಂಪೋಕ ಜಮೀನಿದೆ. ಅದರಲ್ಲಿ 840 ಎಕರೆ ಪ್ರದೇಶವನ್ನು ಆಗಿನ ಡಿಸಿ ಎಂ.ಕನಗವಲ್ಲಿ ಅರಣ್ಯ ಇಲಾಖೆಗೆ ವರ್ಗಾಯಿಸಿದ್ದಾರೆ. ಪ್ರದೇಶ ಘೋಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ನ.18ರಂದು ನಡೆದ ಸಚಿವ ಸಂಪುಟದಲ್ಲಿ ಈ ಪ್ರಸ್ತಾವನೆಗೂ ಅನುಮೋದನೆ ನೀಡಿದ ಬಗ್ಗೆ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಇಲಾಖೆಗೆ ಅಧಿಕೃತ ಮಾಹಿತಿ ಬಂದಿಲ್ಲ. ಇದರಿಂದ ಗೊಂದಲ ಮೂಡುವಂತಾಗಿದೆ.

ಬಂಕಾಪುರ ತೋಳ ಸಂರಕ್ಷಣಾ ಪ್ರದೇಶ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸಂಪುಟದಲ್ಲಿ ಅನುಮೋದನೆ ಸಿಕ್ಕ ಮಾಹಿತಿ ಇದ್ದು, ಈ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಬರಬೇಕಿದೆ. ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.| ಶಿವರಾಜ ಮೇಟಿ ವಲಯ ಅರಣ್ಯಾಧಿಕಾರಿ, ಗಂಗಾವತಿ