ಜಿಲ್ಲೆ

ಸಮಾಜ ಸುಧಾರಣೆಗೆ ಶ್ರಮಿಸಿದ ಸಂತ ಸೇವಾಲಾಲ್

ಕುರುವತ್ತಿ ಶ್ರೀಕಾಂತಪ್ಪ

ಕೊಪ್ಪಳ: ದೇಶಾದ್ಯಂತ ಸಂಚರಿಸಿ ಸಮಾಜ ಸುಧಾರಣೆಗೆ ಶ್ರಮಿಸಿದ ಮಹನೀಯರಲ್ಲಿ ಸಂತ ಸೇವಾಲಾಲ್ ಒಬ್ಬರು ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಹರಿಲಾಲ್ ಪವಾರ್ ಹೇಳಿದರು.

ಜಿಲ್ಲಾಡಳಿತದಿಂದ ನಗರದ ಸಾಹಿತ್ಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೇವಲಾಲ್ ಅವರು ಶಿಕ್ಷಣ, ಸಮಾಜ ಸುಧಾರಣೆ, ಸಂಘಟನೆಗೆ ಶ್ರಮಿಸಿದರು. ಪಶುಪಾಲಕರಾಗಿ ಇಡೀ ದೇಶವನ್ನೇ ಸುತ್ತಿದರು. ಬಂಜಾರ ಸಮಾಜದ ಸಾಂಸ್ಕೃತಿಕ ನಾಯಕ. ನಮ್ಮ ಭಾಷೆ ಭಾರತೀಯ ಭಾಷೆಗಳಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಈ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ನಾವೆಲ್ಲರೂ ಮುಂದಾಗಬೇಕು. ಸೇವಾಲಾಲರು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದ್ದು, ಅವರ ಉಪದೇಶಗಳನ್ನು ನಾವೆಲ್ಲ ಪಾಲಿಸಬೇಕು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್‌ಮಾತನಾಡಿ, ನಮ್ಮ ದೇಶ ಸಾಧು, ಸಂತರು, ಶರಣರ ಬೀಡು. ಅವರಲ್ಲಿ ಸೇವಾಲಾಲರೂ ಒಬ್ಬರು ಎಂದರು. ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮನೋಹರ ಪವಾರ್ ಮಾತನಾಡಿದರು.

ನಗರದ ಸಾಹಿತ್ಯ ಭವನದಿಂದ ಬಹದ್ದೂರಬಂಡಿವರೆಗೆ ಮೆರವಣಿಗೆ ನಡೆಯಿತು. ಗೋಸ್ವಾಮಿ ಮಹಾರಾಜ್ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಶಾಸಕ ರಾಘವೇಂದ್ರ ಹಿಟ್ನಾಳ್, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ತಾಂಡಾ ಅಭಿವೃದ್ಧಿ ನಿಗಮದ ಸದಸ್ಯ ಭರತ್ ನಾಯ್ಕ, ಬಂಜಾರ ಸಮುದಾಯ ಮುಖಂಡರಾದ ಲಕ್ಷ್ಮಣ ನಾಯಕ, ದೇವರಾಜ ಭಂಡಾರಿ, ರಾಮಣ್ಣ ಭಂಡಾರಿ, ರಾಯಚೂರು ಶಂಕರ್ ನಾಯ್ಕ, ಕೆ.ಡಿ.ನಾಯ್ಕ, ಉದಯ ನಾಯ್ಕ, ಪರಸಪ್ಪ, ಪಂಪಣ್ಣ ಪೂಜಾರ ಇತರರಿದ್ದರು.