ಜಿಲ್ಲೆ

ಕಲಾವಿದರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಿ

ಪ್ರವೀಣ ಉದುಸಾ ದಲಬಂಜನ್

ಕೊಪ್ಪಳ: ಐತಿಹಾಸಿಕ ಆನೆಗೊಂದಿ ಉತ್ಸವ ಆಚರಣೆ ಹಾಗೂ ಹಿಂದಿನ ಆನೆಗೊಂದಿ ಉತ್ಸವದಲ್ಲಿ ಭಾಗವಹಿಸಿದ ಕಲಾವಿದರ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹಿಸಿ ಕರವೇ ಜಿಲ್ಲಾ ಘಟಕದ ಪದಾಧಿಕಾರಿಗಳು ಶನಿವಾರ ನಗರದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕಚೇರಿಗೆ ಮನವಿ ಸಲ್ಲಿಸಿದರು.

ಹಂಪಿಯಷ್ಟೆ ಆನೆಗೊಂದಿ ಉತ್ಸವ ಸಹ ಪ್ರಾಮುಖ್ಯ ಹೊಂದಿದೆ. ಇದರ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಸಚಿವ ಶಿವರಾಜ ತಂಗಡಗಿ ಆನೆಗೊಂದಿ ಉತ್ಸವ ಕಡೆಗಣಿಸಿರುವುದು ಸರಿಯಲ್ಲ. ಈ ಭಾಗದಲ್ಲಿ ಆಂಜನೇಯ ಹುಟ್ಟಿದ ಸ್ಥಳವಿದೆ. ವಿಜಯನಗರ ಅರಸರ ಮೊದಲು ರಾಜಧಾನಿ ಆನೆಗೊಂದಿಯಾಗಿತ್ತು. 1998ರ ಮಾದರಿಯಲ್ಲಿ ಹಂಪಿ ಉತ್ಸವದಂತೆಯೇ ಆನೆಗೊಂದಿ ಉತ್ಸವವೂ ನಡೆಯಬೇಕು. 1998ರಲ್ಲಿ ಮಾಜಿ ಡಿಸಿಎಂ ದಿ.ಎಂ.ಪಿ. ಪ್ರಕಾಶ್ ಹಂಪಿ ಉತ್ಸವಕ್ಕೆ ಚಾಲನೆ ನೀಡಿದ್ದರು. ಬಳಿಕ ಆನೆಗೊಂದಿಯಲ್ಲಿ ಅದು ಮುಕ್ತಾಯವಾಗಿತ್ತು. ಈ ಪರಂಪರೆ ಇಂದಿಗೂ ಮುಂದುವರಿಸಬೇಕು ಎಂದು ಆಗ್ರಹಿಸಿದರು.