ಜಿಲ್ಲೆ

ಕೊಪ್ಪಳ ಜಿಲ್ಲಾದ್ಯಂತ ತಿರಂಗಾ ರಂಗು

ಸಚಿವ ಬಿ.ಸಿ.ಪಾಟೀಲ್‌ರಿಂದ ಧ್ವಜಾರೋಹಣ | ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

ಕೊಪ್ಪಳ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಸರಳವಾಗಿ 74ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿ, ಅನೇಕರ ತ್ಯಾಗ ಬಲಿದಾನದಿಂದ ನಾವಿಂದು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ. ಸ್ವಾತಂತ್ರ್ಯ ಹೋರಾಟಕ್ಕೆ ಕೊಪ್ಪಳ ಜಿಲ್ಲೆಯ ಮುಂಡರಗಿ ಭೀಮರಾಯ, ಹಮ್ಮಿಗಿ ಕೆಂಚನಗೌಡ, ಶಿರೂರು ವೀರಭದ್ರಪ್ಪ ಸೇರಿ ಅನೇಕರು ಕೊಡುಗೆ ನೀಡಿದ್ದಾರೆ. 2020ನೇ ವರ್ಷ ನಮ್ಮ ಸರ್ಕಾರಕ್ಕೆ ಸವಾಲಾಗಿದ್ದು, ಕರೊನಾದಿಂದಾಗಿ ತೊಂದರೆ ಎದುರಾಗಿದೆ. ಆದರೂ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿವೆ. ಮೆಕ್ಕೆಜೋಳ ಬೆಳದ ರೈತರಿಗೆ ತಲಾ 5 ಸಾವಿರ ರೂ. ಪರಿಹಾರ ನೀಡಿದ್ದೇವೆ. ಸದ್ಯ ರೈತರೇ ತಮ್ಮ ಬೆಳೆ ಸಮೀಕ್ಷೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಕೊಪ್ಪಳದಲ್ಲಿ ಪ್ರಾಯೋಗಿಕವಾಗಿ ಮೊಬೈಲ್ ಟೆಸ್ಟಿಂಗ್ ಲ್ಯಾಬ್ ಮಾಡಿದ್ದು, ಶೀಘ್ರ ಅನುಷ್ಠಾನಕ್ಕೆ ಬರಲಿದೆ ಎಂದರು.

ಕರೊನಾ ಹಿನ್ನೆಲೆಯಲ್ಲಿ ಪೊಲೀಸ್, ಗೃಹರಕ್ಷಕದಳ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿ ಮಾತ್ರ ಪಥಸಂಚಲನ ನಡೆಸಿದರು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರು ಹಾಗೂ ಹೆಚ್ಚು ಅಂಕ ಪಡೆದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತ. ಕರೊನಾ ಜಾಗೃತಿ ಕುರಿತು ವಿದ್ಯಾರ್ಥಿಗಳು ಜಾಗೃತಿ ನಾಟಕ ಪ್ರದರ್ಶಿಸಿದರು. ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ್, ಜಿಪಂ ಅಧ್ಯಕ್ಷ ಎಚ್.ವಿಶ್ವನಾಥರಡ್ಡಿ, ತಾಪಂ ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಹಾಂತೇಶ ಪಾಟೀಲ್, ಡಿಸಿ ಎಸ್.ವಿಕಾಸ್ ಕಿಶೋರ್, ಜಿಪಂ ಸಿಇಒ ರಘುನಂದನ್‌ಮೂರ್ತಿ, ಎಡಿಸಿ ಎಂ.ಪಿ.ಮಾರುತಿ, ಎಸ್ಪಿ ಜಿ.ಸಂಗೀತಾ, ತಹಸೀಲ್ದಾರ್ ಜೆ.ಬಿ.ಮಜ್ಗಿ ಇತರರಿದ್ದರು.

ಕರೊನಾ ಸೇನಾನಿಗಳಿಗೆ ಗೌರವ : 74ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ನಗರದ ಜಿಲ್ಲಾಡಳಿ ಭವನದಲ್ಲಿ ಡಿಸಿ ಎಸ್.ವಿಕಾಸ್ ಕಿಶೋರ್ ಧ್ವಜಾರೋಹಣ ನೆರವೇರಿಸಿದರು. ಜಿಪಂ ಸಿಇಒ ರಘುನಂದನ್‌ಮೂರ್ತಿ, ಎಡಿಸಿ ಎಂ.ಪಿ.ಮಾರುತಿ ಸೇರಿ ಇತರ ಅಧಿಕಾರಿಗಳಿದ್ದರು. ಕಾಂಗ್ರೆಸ್ ಜಿಲ್ಲಾಕಚೇರಿಯಲ್ಲಿ ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ಧ್ವಜಾರೋಹಣ ನೆರವೇರಿಸಿದರು. ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಹಿಟ್ನಾಳ್ ಸೇರಿ ಇತರರಿದ್ದರು. ಮೆಡಿಕಲ್ ಕಾಲೇಜಿನಲ್ಲಿ ನಿರ್ದೇಶಕ ವಿಜಯನಾಥ ಇಟಗಿ ಧ್ವಜಾರೋಹಣ ಮಾಡಿದರು. ಕಿಮ್ಸ್ ಸಿಬ್ಬಂದಿ ಇದ್ದರು. ಎಬಿವಿಪಿ ಕಾರ್ಯಕರ್ತರು ಧ್ವಜಾರೋಹಣ ಅಂಗವಾಗಿ ಕರೊನಾ ಸೇನಾನಿಗಳಾದ ಪೊಲೀಸರು, ಆಶಾ, ಅಂಗನವಾಡಿ ಕಾರ್ಯಕರ್ತರು ಹಾಗೂ ಪೌರ ಕಾರ್ಮಿಕರನ್ನು ಸನ್ಮಾನಿಸಿದರು. ಸಂಘದ ಶಶಿಧರ ದೇಶಪಾಂಡೆ, ಪ್ರವೀಣ ಕುಮಾರ್ ನಾಯಕ ಇದ್ದರು.