ಮುನಿರಾಬಾದ್: ಹುಲಿಗಿ ಗ್ರಾಮಸ್ಥರ ಹಲವು ವರ್ಷಗಳ ಕನಸಾಗಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ಪಾದಚಾರಿಗಳಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡದೆ ಹುಲಿಗಿ-ಮುನಿರಾಬಾದ್ ರೈಲು ನಿಲ್ದಾಣ ಸಂಪರ್ಕಿಸುವ ಎಲ್.ಸಿ. 79 ರೈಲ್ವೆ ಗೇಟ್ ಅನ್ನು ಶಾಶ್ವತವಾಗಿ ಬಂದ್ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ 2026ರ ಸೆ.4ರಂದು ಪಾದಚಾರಿಗಳಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ನಂತರವೇ ಎಲ್.ಸಿ. 79 ಗೇಟ್ ಅನ್ನು ಶಾಶ್ವತವಾಗಿ ಮುಚ್ಚಬೇಕು ಎಂದು ಸ್ಪಷ್ಟ ಆದೇಶ ಹೊರಡಿಸಿದ್ದಾರೆ. ಆದರೆ, ಡಿಸಿ ಆದೇಶವನ್ನೂ ಧಿಕ್ಕರಿಸಿ ರೈಲ್ವೆ ಅಧಿಕಾರಿಗಳು ಏಕಾಏಕಿ ಗೇಟ್ ಬಂದ್ ಮಾಡಿದ್ದಾರೆಂದು ವಿವಿಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೇಟ್ ಮುಚ್ಚಿರುವುದರಿಂದ ದೈನಂದಿನ ಕೂಲಿ ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ ತೊಂದರೆಯಾಗಿದೆ. ಹೊಸ ಮೇಲ್ಸೇತುವೆ ಮೇಲೆ ವಾಹನಗಳು ವೇಗವಾಗಿ ಚಲಿಸುತ್ತವೆ. ಅಲ್ಲದೆ ರೈಲು ನಿಲ್ದಾಣ ಹಾಗೂ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಮಾರ್ಗವಾಗಿರುವುದರಿಂದ ಮಕ್ಕಳು, ವೃದ್ಧರು ಹಾಗೂ ಪಾದಚಾರಿಗಳು ಸೇತುವೆ ಹತ್ತಿ-ಇಳಿಯುವುದು ಕಷ್ಟ.
ಅಲ್ಲದೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳೂ ಇವೆ. ಆದ್ದರಿಂದ ಜಿಲ್ಲಾಡಳಿತವು ತಕ್ಷಣವೇ ಮಧ್ಯಪ್ರವೇಶಿಸಿ, ಪಾದಚಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವವರೆಗೆ ಎಲ್.ಸಿ. 79 ಗೇಟ್ ಬಂದ್ ಮಾಡದಂತೆ ರೈಲ್ವೆ ಇಲಾಖೆಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.