ಮುನಿರಾಬಾದ್: ಅನಂತನ ಹುಣ್ಣಿಮೆ ನಿಮಿತ್ತ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಶನಿವಾರ ವಿಶೇಷ ಪೂಜೆ ಸೇರಿ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿ ದೇವಿ ದರ್ಶನ ಪಡೆದರು.
ಹುಣ್ಣಿಮೆ ಅಂಗವಾಗಿ ದೇವಿಗೆ ಬೆಳಗ್ಗೆಯಿಂದಲೇ ವಿಶೇಷ ಅಭಿಷೇಕ, ಮಹಾಪೂಜೆ ನೆರವೇರಿಸಲಾಯಿತು. ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಯಿತು. ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಗಂಗಾಪೂಜೆ ಸಲ್ಲಿಸಿ, ದೇವಿಗೆ ಹೂ-ಹಣ್ಣುಗಳನ್ನು ಅರ್ಪಿಸಿ ಸರದಿಯಲ್ಲಿ ನಿಂತು ದರ್ಶನ ಪಡೆದರು. ದೇವಸ್ಥಾನ ಮಂಡಳಿ ಹಾಗೂ ಪೊಲೀಸ್ ಇಲಾಖೆಯಿಂದ ಯಾವುದೇ ಸಮಸ್ಯೆ ಆಗದಂತೆ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಎಲ್ಲೆಂದರಲ್ಲಿ ಕಾಯಿ ಒಡೆದ ಭಕ್ತರು: ಇತ್ತೀಚೆಗಷ್ಟೇ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಮುಜರಾಯಿ ಸಚಿವ ಕೆ.ಎಸ್. ಬಸವಂತಪ್ಪನವರು ಕ್ಷೇತ್ರದ ನೈರ್ಮಲ್ಯ, ಸ್ವಚ್ಛತೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಶನಿವಾರ ದೇವಸ್ಥಾನದ ಆವರಣದಲ್ಲಿ ಭಕ್ತರು ಎಲ್ಲೆಂದರಲ್ಲಿ ತೆಂಗಿನಕಾಯಿ ಒಡೆದಿದ್ದರಿಂದ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿತ್ತು. ನಿರ್ವಹಣೆಯಲ್ಲಿ ದೇವಸ್ಥಾನ ಮಂಡಳಿ ಹಾಗೂ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಭಕ್ತರ ಸಂಖ್ಯೆಯಲ್ಲಿ ಇಳಿಕೆ: ಸಾಮಾನ್ಯವಾಗಿ ಪ್ರತಿ ಹುಣ್ಣಿಮೆಯಂದು ಹುಲಿಗಿ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದರು. ಆದರೆ, ಈ ಬಾರಿ ಅನಂತನ ಹುಣ್ಣಿಮೆ ಅವಧಿಯಲ್ಲಿ ಜೋಕುಮಾರಸ್ವಾಮಿ ಹಬ್ಬದ ಸಾಂಪ್ರದಾಯಿಕ ಶೋಕಾಚರಣೆ ಹಾಗೂ ವಿವಿಧ ಧಾರ್ಮಿಕ ನಿಯಮಗಳ ನಿಮಿತ್ತ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡುಬಂತು.