ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಕೃಷಿನಿರತ ಮಹಿಳಾ ದಿನಾಚರಣೆ ಹಾಗೂ ಕಿಸಾನ್ ಗೋಷ್ಠಿ ಕಾರ್ಯಕ್ರಮವನ್ನು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಉದ್ಘಾಟಿಸಿದರು.  Shashidhara L
ಕೊಪ್ಪಳ

ಸ್ವಂತ ಉದ್ಯಮದಿಂದ ಆರ್ಥಿಕ ಸ್ವಾವಲಂಬನೆ

ಕೊಪ್ಪಳ: ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ವಿವಿಧ ಯೋಜನೆಗಳು ಹಾಗೂ ಸಹಾಯಧನ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹೇಳಿದರು.

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಗುರುವಾರ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಮತ್ತು ಕೃಷಿ ಇಲಾಖೆಯ ‘ಆತ್ಮಾ’ ಯೋಜನೆಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಕೃಷಿನಿರತ ಮಹಿಳಾ ದಿನಾಚರಣೆ ಹಾಗೂ ಕಿಸಾನ್ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಬದರಿ ಪ್ರಸಾದ್ ಪಿ.ಆರ್. ಮಾತನಾಡಿ, ವಿಕಸಿತ ಕೃಷಿ ಮತ್ತು ವಿಕಸಿತ ಭಾರತ ನಿರ್ಮಾಣದಲ್ಲಿ ಮಹಿಳಾ ರೈತರ ಪಾತ್ರ ಎಂಬ ಧ್ಯೀಯವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ. ಈಗಾಗಲೇ ಹಲವು ರೈತ ಮಹಿಳೆಯರು ಬೆಳೆದ ಬೆಳೆಗೆ ಮೌಲ್ಯವರ್ಧನೆ ಮಾಡುವ ಮೂಲಕ ಯಶಸ್ವಿ ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ. ಇತರ ಮಹಿಳೆಯರು ಸಹ ಸ್ವಂತ ಮಾರುಕಟ್ಟೆ ಕಂಡುಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದರು.

ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ ಕುಲಕರ್ಣಿ ಮಾತನಾಡಿದರು. ಇದೇ ವೇಳೆ ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಹಾಗೂ ಉನ್ನತ ಸಾಧನೆ ಮಾಡಿದ ಮೂವರು ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಆತ್ಮಾ ಯೋಜನೆಯ ಉಪನಿರ್ದೇಶಕ ಶಿವಪ್ಪ, ಯಮನೂರಪ್ಪ ಇತರರಿದ್ದರು.