ಕನಕಗಿರಿ: ತಾಲೂಕಿನ ಕಲಕೇರಿ ಗ್ರಾಮದ ಸ್ಮಶಾನದಲ್ಲಿ ವಿಚಿತ್ರ ರೀತಿಯಲ್ಲಿ ವಾಮಾಚಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ವಾಮಾಚಾರ ಮಾಡಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಜೀವಂತ ಐವರು ದಲಿತರ ಹಾಗೂ ಒಂದು ಬೈಕ್ ಹಾಗೂ ಟ್ರಾೃಕ್ಟರ್ ಫೋಟೊಗಳನ್ನಿಟ್ಟು ವಾಮಾಚಾರ ಮಾಡಲಾಗಿದೆ. ದೀಪಾವಳಿ ಅಮಾವಾಸ್ಯೆ ದಿನ ರಾತ್ರಿ ವಾಮಾಚಾರ ಮಾಡಿರುವ ಶಂಕೆಯಿದೆ. ಕಪ್ಪು ಬಟ್ಟೆಯಲ್ಲಿ ಗೊಂಬೆ ಮಾಡಿ ಗಜಗ, ಜಾಜಿಕಾಯಿ, ಸೂಜಿ, ನಿಂಬೆ ಹಣ್ಣನ್ನು ಕಂಬಳಿ ಮೇಲೆ ಇಟ್ಟು ಭಯಾನಕವಾಗಿ ವಾಮಾಚಾರ ಮಾಡಿದ್ದಾರೆ.
ಇದು ಕುರಿಗಾಹಿಯೊಬ್ಬನಿಗೆ ಕೆಲ ದಿನಗಳ ಬಳಿಕ ಕಣ್ಣಿಗೆ ಬಿದ್ದಿದೆ. ವಾಮಾಚಾರ ಕಂಡು ಬೆಚ್ಚಿ ಬಿದ್ದು, ಗ್ರಾಮಕ್ಕೆ ಬಂದು ವಿಷಯ ತಿಳಿಸಿದ್ದಾನೆ. ಗ್ರಾಮಸ್ಥರು ಸ್ಮಶಾನಕ್ಕೆ ತೆರಳಿ ನೋಡಿ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಪೊಲೀಸರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಲಕೇರಿ ಹಾಗೂ ಕುಷ್ಟಗಿ ತಾಲೂಕಿನ ಮೆಣೇದಾಳ ಗ್ರಾಮದವರ ಫೋಟೊಗಳು ಎನ್ನಲಾಗಿದೆ. ಘಟನೆಗೆ ಕಾರಣ, ವಾಮಾಚಾರ ಮಾಡಿದವರನ್ನು ಪತ್ತೆ ಹಚ್ಚಲಾಗುವುದು ಎಂದು ಪಿಐ ಶಿವರಾಜ ಇಂಗಳೆ ತಿಳಿಸಿದ್ದಾರೆ.