ಕುಷ್ಟಗಿ: ಆಡಂಬರದ ಮದುವೆಗಳಿಂದ ಆರ್ಥಿಕ ಹೊರೆಯಾಗಲಿದ್ದು, ಅಂತಹ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು ಅವಶ್ಯ ಎಂದು ಕಾಡಾ ಅಧ್ಯಕ್ಷ, ಮುಸ್ಲಿಂ ಪಂಚ ಕಮಿಟಿಯ ತಾಲೂಕು ಅಧ್ಯಕ್ಷ ಹಸನಸಾಬ್ ದೋಟಿಹಾಳ ಹೇಳಿದರು.
ಪಟ್ಟಣದ ಫಾತಿಮಾ ಶಾದಿಮಹಲ್ನಲ್ಲಿ ಶನಿವಾರ ಮುಸ್ಲಿಂ ಧರ್ಮಗುರುಗಳು, ಮುಸ್ಲಿಂ ಪಂಚ ಕಮಿಟಿ ಹಾಗೂ ಯುವಕರನ್ನು ಒಳಗೊಂಡು ಏರ್ಪಡಿಸಿದ್ದ ಸರಳ ವಿವಾಹ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಸ್ಲಿಂ ವಿವಾಹಗಳಲ್ಲಿ ದುಂದು ವೆಚ್ಚ, ಅನಗತ್ಯ ಆಚರಣೆಗಳಿಗೆ ಕಡಿವಾಣ ಹಾಕಿ, ಸರಳ ವಿವಾಹ ಪದ್ಧತಿ ಅಳವಡಿಸಿಕೊಳ್ಳಬೇಕು. ವಿವಾಹ ವೆಚ್ಚಗಳ ಅಧ್ಯಯನ ಮತ್ತು ಆರ್ಥಿಕ ಸಮೀಕ್ಷೆಗಳ ಪ್ರಕಾರ ಭಾರತದಲ್ಲಿ ಮುಸ್ಲಿಂ ಸಮಾಜವು ಪ್ರತಿ ವರ್ಷ ಮದುವೆಗಳಿಗಾಗಿಯೇ ಅಂದಾಜು 12 ಸಾವಿರ ಕೋಟಿ ರೂ.ಯಿಂದ 25 ಸಾವಿರ ಕೋಟಿ ರೂ.ಗೂ ಅಧಿಕ ಹಣವನ್ನು ವ್ಯಯಿಸುತ್ತಿದೆ. ಇದರಿಂದ ಹಲವರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಆದ್ದರಿಂದ ಇದನ್ನು ತಪ್ಪಿಸುವ ತುರ್ತು ಅಗತ್ಯವಿದೆ.
ಅನಗತ್ಯ ಆಚರಣೆ ‘ಮಂಗನಿ ರಸಮ್’ (ನಿಶ್ಚಿತಾರ್ಥದ ವಿಧಿ) ಹಾಗೂ ಶುಕ್ರಾನಾ ಕಾರ್ಯಕ್ರಮಗಳನ್ನು ಕೈಬಿಡಬೇಕು. ಹೆಣ್ಣುಮಕ್ಕಳ ಪಾಲಕರ ಮೇಲೆ ಯಾವುದೇ ಆರ್ಥಿಕ ಹೊರೆ ಬೀಳದಂತೆ ವರನ ಕಡೆಯವರು ನಡೆದುಕೊಳ್ಳಬೇಕು. ಮಕ್ಕಳ ಉನ್ನತ ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಆದ್ಯತೆ ನೀಡಬೇಕು ಎಂದು ಹಸನಸಾಬ್ ದೋಟಿಹಾಳ್ ಸಲಹೆ ನೀಡಿದರು. ಇದಕ್ಕೆ ಸಭೆಯಲ್ಲಿ ಸರ್ವರು ಸಹಮತ ವ್ಯಕ್ತಪಡಿಸಿದರು.
ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಹಾಫೀಜ್ ಮೌಲಾನ ಎಂ., ಧರ್ಮಗುರು ಫಜಲೇ ಹಾಜೀಂ ಹಾಫೀಜ್ ಜಾಫರ್, ನಗರ ಪಂಚ ಕಮಿಟಿ ಅಧ್ಯಕ್ಷ ಅಹ್ಮದ್ ಹುಸೇನ ಆದೋನಿ, ಪುರಸಭೆ ಮಾಜಿ ಅಧ್ಯಕ್ಷ ಮೈನುದ್ದೀನ್ ಮುಲ್ಲಾ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ಸಾಬ್ ಮೂಲಿಮನಿ, ಅಮಿನುದ್ದೀನ್ ಮುಲ್ಲಾ, ಡಾ.ಬಾಬು, ಮುರ್ತುಜಾ ಅತ್ತಾರ, ಮೆಹಬೂಬ್ ಕ್ವಾಲಿಟಿ, ಮುರ್ತುಜಾ ಪೇಂಟರ್, ಶಾಮೀದ್ ಗಂದೇಣ್ಣೆ ಇತರರಿದ್ದರು.