ಯಲಬುರ್ಗಾ ತಾಪಂ ಕಚೇರಿ ಮುಂದೆ ಧರಣಿ ಕೈಗೊಂಡಿರುವ ಸಂಕನೂರು ಗ್ರಾಮದ ಶರಣವ್ವ ಕಟ್ಟಿಮನಿ. Shashidhara L
ಕೊಪ್ಪಳ

ವಸತಿ ಹಣ ಬಿಡುಗಡೆಗೆ ನಿರ್ಲಕ್ಷೃ, ಮಹಿಳೆ ಧರಣಿ

ಯಲಬುರ್ಗಾ: ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಎರಡನೇ ಕಂತಿನ ಹಣ ಬಿಡುಗಡೆ ಮಾಡಲು ಸಂಕನೂರು ಗ್ರಾಪಂ ಪಿಡಿಒ ಸತಾಯಿಸುತ್ತಿದ್ದು, ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಗ್ರಾಮದ ಶರಣವ್ವ ಕಟ್ಟಿಮನಿ ಗುರುವಾರ ತಾಪಂ ಆವರಣದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ಸಂಕನೂರು ಗ್ರಾಮ ಈ ಹಿಂದೆ ಹಿರೇಮ್ಯಾಗೇರಿ ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿದ್ದಾಗ 2007-2008ರಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಒಟ್ಟು 26 ಫಲಾನುಭವಿಗಳಿಗೆ ನಿವೇಶನ ಮಂಜೂರು ಮಾಡಿದ್ದು, ನಾನು ಒಬ್ಬ ಅರ್ಹ ಫಲಾನುಭವಿಯಾಗಿದ್ದೇನೆ. ಮಂಜೂರಾದ ನಿವೇಶನದಲ್ಲಿ ಈಗಾಗಲೇ 25 ಜನ ಫಲಾನುಭವಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಾನಾ ವಸತಿ ಯೋಜನೆಗಳಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ನನಗೂ 2024 -25ನೇ ಸಾಲಿನಲ್ಲಿ ಪಿಎಂಜಿಎಸ್‌ವೈ ಯೋಜನೆಯಡಿ ಮನೆ ಮಂಜೂರಾಗಿದೆ.

ಸಂಕನೂರು ಗ್ರಾಪಂನಿಂದ ಅನುಮತಿ ಪಡೆದು ಮನೆ ಕಾಮಗಾರಿ ಆರಂಭಿಸಿದ್ದು, ಸಿಬ್ಬಂದಿ ಜಿಪಿಎಸ್ ಮಾಡಿ ಮೊದಲ ಕಂತಿನ ಹಣ ನನ್ನ ಖಾತೆಗೆ ಜಮಾ ಮಾಡಿದ್ದಾರೆ. ಆದರೆ, ಈಗ ಪಿಡಿಒ ಫಕೀರಪ್ಪ ಕಟ್ಟಿಮನಿ, ಎರಡನೇ ಸಲ ಜಿಪಿಎಸ್ ಮಾಡಿಕೊಡಲು ಅನವಶ್ಯಕ ವಿಷಯಗಳನ್ನು ಹೇಳುತ್ತ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಾನು ವಿಧವೆಯಾಗಿದ್ದು, ತೊಂದರೆ ನೀಡಲು ಮುಂದಾಗಿರುವ ಪಿಡಿಒ ವರ್ತನೆ ಅವಮಾನೀಯ. ಈ ಹಿಂದೆ ಇಲ್ಲದ ಕಾನೂನು ಈಗ ಅಡ್ಡಿಯಾಗಲು ಕಾರಣವೇನು ಎಂದು ಪ್ರಶ್ನಿಸಿದರು.

ಈ ಕುರಿತು ಮೇಲಧಿಕಾರಿಗಳಿಗೆ ದೂರು ನೀಡಿದ್ದೇನೆ. ಅವರ ಮಾತಿಗೂ ಬೆಲೆ ಕೊಡದೆ ಪಿಡಿಒ ಉದ್ಧಟತನ ಮೆರೆಯುತ್ತಿದ್ದಾರೆ. ಕೇಳಿದಷ್ಟು ಹಣ ಕೊಡದೇ ಇರುವುದಕ್ಕೆ ನಾನು ಹಿಂಸೆ ಅನುಭವಿಸಬೇಕಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಶರಣವ್ವ ಕಟ್ಟಿಮನಿ ಆಗ್ರಹಿಸಿದರು.