ಚಿತ್ರದುರ್ಗ ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನೇತೃತ್ವದ ಅಧಿಕಾರಿಗಳ ತಂಡ ಗಂಗಾವತಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮೇಲೆ ಬುಧವಾರ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿತು.  Shashidhara L
ಕೊಪ್ಪಳ

ಲೋಕಾಯುಕ್ತ ಅಧಿಕಾರಿಗಳ ದಾಳಿ

ವಿವಿಧ ಇಲಾಖೆಗಳಿಗೆ ದಿಢೀರ್ ಭೇಟಿ ಹಲವು ಯೋಜನೆಗಳ ಕಡತ ಪರಿಶೀಲನೆ

ಗಂಗಾವತಿ: ಯೋಜನೆ ಅನುಷ್ಠಾನಗಳ ಮೇಲಿನ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ನಗರದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮೇಲೆ ಗುರುವಾರ ದಾಳಿ ನಡೆಸಿದ್ದು, ಅನುದಾನ ಬಳಕೆಯ ದಾಖಲೆಗಳನ್ನು ಪರಿಶೀಲಿಸಿತು.

ಜಿಲ್ಲೆಯಲ್ಲಿ ವಿವಿಧ ತಾಲೂಕಿನ ಇಲಾಖೆಗಳಲ್ಲಿನ ಕಡತ ಮತ್ತು ಕಾಮಗಾರಿಗಳ ಪರಿಶೀಲನೆ ಹಿನ್ನೆಲೆಯಲ್ಲಿ ರಾಜ್ಯದ 17 ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ. ನಗರದ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಚಿತ್ರದುರ್ಗ ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನೇತೃತ್ವದಲ್ಲಿ ಐದು ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ, ಕಡತಗಳನ್ನು ಪರಿಶೀಲಿಸಿತು. ಆನ್‌ಲೈನ್‌ನಲ್ಲಿನ ದತ್ತಾಂಶಗಳಿಂದ ಮಾಹಿತಿ ಪಡೆದ ತಂಡ, ಯೋಜನೆ ಅನುಷ್ಠಾನ, ವಿಳಂಬ ಸೇರಿ ಲೋಪದೋಷಗಳ ಬಗ್ಗೆ ಮಾಹಿತಿ ಸಂಗ್ರಹಿಸಿತು. ಎರಡು ಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಿದ ತಂಡ, ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆ ಕಾಮಗಾರಿಗಳ ವರದಿ ಪಡೆದುಕೊಂಡಿತ್ತು. ಸಣ್ಣಪುಟ್ಟ ದೂರುಗಳ ಹಿನ್ನೆಲೆಯಲ್ಲಿ ಕಡತಗಳ ಪರಿಶೀಲಿಸಿದ್ದು, ಸದ್ಯ ಏನನ್ನೂ ಹೇಳಲಾಗದು ಎಂದು ತಂಡ ತಿಳಿಸಿತು.

ಇದಕ್ಕೂ ಮುನ್ನ ಸಣಾಪುರ ಗ್ರಾಪಂಗೆ ತೆರಳಿದ ತಂಡ ಕರವಸೂಲಿ ಪ್ರಮಾಣ, ವಿಬಿ ಜಿ ರಾಮ್ ಜಿ ಯೋಜನೆ, 15ನೇ ಹಣಕಾಸು ಯೋಜನೆಗಳ ಕಡತಗಳನ್ನು ಪರಿಶೀಲಿಸಿತು. ಕೆಲ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ, ಗುಣಮಟ್ಟ ಖಚಿತಪಡಿಸಿಕೊಂಡಿತ್ತು. ಲೋಕಾಯುಕ್ತ ತಂಡದ ದಿಢೀರ್ ದಾಳಿ ಹಿನ್ನೆಲೆಯಲ್ಲಿ ಸಿಬ್ಬಂದಿ ತಬ್ಬಿಬ್ಬಾಗಿದ್ದು, ಯಾವ ಕಾರಣಕ್ಕಾಗಿ ದಾಳಿ ನಡೆಸಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಕೆಲ ಇಲಾಖೆ ಮತ್ತು ಗ್ರಾಪಂ ಅಧಿಕಾರಿಗಳು ಕಚೇರಿಯಿಂದ ನಾಪತ್ತೆಯಾಗಿದ್ದು, ವಿಸಿ ಮತ್ತು ಜಿಲ್ಲಾ ಕಚೇರಿಯಲ್ಲಿ ಕೆಲಸದ ನೆಪ ಹೇಳಿ ತಪ್ಪಿಸಿಕೊಂಡ ಘಟನೆಯೂ ನಡೆಯಿತು.