ಕನಕಗಿರಿ: ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡ ಪಟ್ಟಣದ ಲೇಔಟ್ಗಳು ಸಂಪೂರ್ಣ ಅಭಿವೃದ್ಧ ಆಗುವವರೆಗೆ ನಮೂನೆ-3 ನೀಡದಂತೆ ಒತ್ತಾಯಿಸಿ ಕರವೇ (ನಾರಾಯಣಗೌಡ ಬಣ) ತಾಲೂಕು ಘಟಕದಿಂದ ಮುಖ್ಯಾಧಿಕಾರಿ ಜೆ. ನಾಗರಾಜಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ಹರೀಶ ಪೂಜಾರ ಮಾತನಾಡಿ, ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಲೇಔಟ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡ ಬಳಿಕ ಶೇ.40 ನಿವೇಶನಗಳು ಮಂಜೂರು ಮಾಡಲಾಗುತ್ತದೆ. ಇನ್ನುಳಿದ ಶೇ.60 ನಿವೇಶನಗಳನ್ನು ಬಡಾವಣೆಯಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಿದ ಬಳಿಕ ಬಿಡುಗಡೆ ಮಾಡಬೇಕು. ಆದರೆ, ಹಲವು ಲೇಔಟ್ಗಳಲ್ಲಿ ಚರಂಡಿ, ನೀರಿನ ಪೈಪ್ಲೈನ್, ವಿದ್ಯುತ್, ಉದ್ಯಾನ ಸೇರಿ ಇತರ ಸೌಲಭ್ಯಗಳನ್ನು ಒದಗಿಸಿಲ್ಲ. ಲಕ್ಷಾಂತರ ರೂ. ಖರ್ಚು ಮಾಡಿ ಖರೀದಿಸಿದವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ಲೇಔಟ್ಗಳು ಸಂಪೂರ್ಣ ಅಭಿವೃದ್ಧಿಪಡಿಸಿದ ಬಳಿಕ ಇನ್ನುಳಿದ ನಿವೇಶನಗಳನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ನಗರ ಘಟಕದ ಅಧ್ಯಕ್ಷ ಬಸವರಾಜ ಕೋರಿ ಮಾತನಾಡಿ, ಪಟ್ಟಣದ ವಾಲ್ಮೀಕಿ ವೃತ್ತದಿಂದ ನವಲಿಗೆ ಸಾಗುವ ರಸ್ತೆಯನ್ನು ಅಭಿವೃದ್ಧಿ ಪಡಿಸುವ ನೆಪದಲ್ಲಿ ಫುಟ್ಪಾತ್ ತೆರವುಗೊಳಿಸಲಾಯಿತು. ಆದರೆ, ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ರಸ್ತೆಯಲ್ಲಿ ನಿತ್ಯ ಧೂಳಿನಿಂದ ರಸ್ತೆಬದಿ ವ್ಯಾಪಾರಸ್ಥರು ಸೇರಿ ಜನ ಸಾಮಾನ್ಯರು ತತ್ತರಿಸಿದ್ದಾರೆ. ಶೀಘ್ರವೇ ರಸ್ತೆ ಅಭಿವೃದ್ಧಿಪಡಿಸಲು ಮುಂದಾಗಬೇಕು. ಅಲ್ಲದೆ, ಪಟ್ಟಣ ಪಂಚಾಯಿತಿಯಲ್ಲಿ ಆಸ್ತಿ ತೆರಿಗೆ ವಿವರದ ನಾಮಫಲಕ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ವೆಂಕಟೇಶ ಬಲಿಜ, ಹನುಮೇಶ ಭಜಂತ್ರಿ, ದೊಡ್ಡಬಸವ ಹಡಪದ, ತೊಂಡೆಪ್ಪ ಯಾದವ, ಬಸವರಾಜ, ಯಮನೂರಪ್ಪ ಇತರರಿದ್ದರು.