ಚಳಗೇರಿಯಲ್ಲಿ ಶ್ರೀ ವಿರೂಪಾಕ್ಷ ಶಿವಾಚಾರ್ಯರ ಪುಣ್ಯಸ್ಮರಣೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಸುತ್ತೂರು ಶ್ರೀಗಳು. ಶಿವಸಂಗಮೇಶ ಶಿವಾಚಾರ್ಯರು, ಅಮರೇಗೌಡ ಬಯ್ಯಪುರ, ಬಸವರಾಜ ಹಳ್ಳೂರು, ಬಿ.ಎಸ್.ಪಾಟೀಲ್ ಇತರರಿದ್ದರು. 
ಕೊಪ್ಪಳ

ರೈತರ ಶ್ರಮಕ್ಕೆ ಪ್ರತಿಯೊಬ್ಬರೂ ಗೌರವ ನೀಡಲಿ

ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಆಶೀರ್ವಚನ ಚಳಗೇರಿಯಲ್ಲಿ ವಿರೂಪಾಕ್ಷಲಿಂಗ ಶ್ರೀಗಳ ಪುಣ್ಯಸ್ಮರಣೆ

ಕುಷ್ಟಗಿ: ಪ್ರಸ್ತುತ ಜಂಜಾಟದ ಜೀವನದಲ್ಲಿ ಶಾಂತಿ, ಸಮಾಧಾನ ಇಲ್ಲವಾಗಿದೆ. ಮನುಷ್ಯ ನೆಮ್ಮದಿ, ತೃಪ್ತಿ ಹೊಂದಲು ಧಾರ್ಮಿಕ ಆಚರಣೆ, ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಎಂದು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.

ಚಳಗೇರಿ ಗ್ರಾಮದಲ್ಲಿ ವಿರೂಪಾಕ್ಷಲಿಂಗ ಶಿವಾಚಾರ್ಯರ 12ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಗುರುವಾರ ಸಂಜೆ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದರು. ಮಠಗಳು ಸಮಾಜಕ್ಕೆ ಶಿಕ್ಷಣ, ದಾಸೋಹ ಹಾಗೂ ಉತ್ತಮ ಸಂಸ್ಕಾರ ನೀಡುವ ಮೂಲಕ ಮಹತ್ವದ ಸೇವೆ ಸಲ್ಲಿಸುತ್ತಿವೆ. ಸ್ವಾತಂತ್ರ್ಯ ಪೂರ್ವದಿಂದಲೂ ಮಠಗಳು ಶೈಕ್ಷಣಿಕ ಕ್ಷೇತ್ರಳಿಗೆ ಕೊಡುಗೆ ನೀಡಿವೆ. ಮಠಾಧೀಶರಲ್ಲಿ ತಾಯಿಯಂತಹ ಪ್ರೀತಿ ಮತ್ತು ಕಾಳಜಿ ಇದೆ. ಅನ್ನ ನೀಡುವ ರೈತರ ಶ್ರಮಕ್ಕೆ ಪ್ರತಿಯೊಬ್ಬರೂ ಗೌರವ ನೀಡಬೇಕು ಎಂದರು.

ಜಿಪಂ ಮಾಜಿ ಅಧ್ಯಕ್ಷೆ ವೀಣಾ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಮತ್ತು ಸನ್ನಡತೆ ಕಲಿಸಬೇಕು ಎಂದರು. ಮುಪ್ಪಿನ ಬಸವಲಿಂಗ ಶ್ರೀಗಳು ಮಾತನಾಡಿ, ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ನೂರಾರು ರೈತರಿಗೆ ಸನ್ಮಾನ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ 75 ವರ್ಷ ಮೇಲ್ಪಟ್ಟ ಹಿರಿಯ ದಂಪತಿಗಳಿಗೆ ಗೌರವ ಸಲ್ಲಿಸಲಾಯಿತು. ಶಿವ ಸಂಗಮೇಶ್ವರ ಶಿವಾಚಾರ್ಯರು, ಮದ್ದಾನಿ ಹಿರೇಮಠದ ಕರಿಬಸವ ಶಿವಾಚಾರ್ಯರು, ಅಭಿನವ ಕರಿಬಸವ ಶಿವಾಚಾರ್ಯರು ನಿಡಶೇಸಿ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಇತರರಿದ್ದರು.