ಕವಲೂರು: ಬೇಸಿಗೆಯನ್ನೂ ಮೀರಿಸುವ ಮೈಸುಡುವ ಬಿಸಿಲಿನ ಮಧ್ಯೆ ಸೋಮವಾರ ಸಂಜೆ ಒಂದು ಗಂಟೆಗೂ ಹೆಚ್ಚು ಹೊತ್ತು ಸುರಿದ ವರ್ಷಧಾರೆಗೆ ಜನತಾ ಪ್ಲಾಟ್‌ಗೆ ಮಳೆ ನೀರು ನುಗ್ಗಿ ಜನರು ಪರದಾಡುವಂತಾಯಿತು.
ಮಳೆಯಿಂದ ಗ್ರಾಮದ ತಗ್ಗು ಪ್ರದೇಶಗಳಿಗೆ ನೀರು ಹರಿಯಿತು. ಜನತಾ ಪ್ಲಾಟ್‌ನ ಹಲವು ಮನೆಗಳ ಸುತ್ತ ಮಳೆ ನೀರು ಆವರಿಸಿತು. ಇದರಿಂದ ನಿವಾಸಿಗಳು ತೊಂದರೆ ಅನುಭವಿಸಿದರು. ಗ್ರಾಪಂ ಆವರಣ ಕೂಡ ಜಲಾವೃತವಾಗಿತ್ತು. ಹಳ್ಳ ಕೊಳ್ಳಗಳು ತುಂಬಿ ಹರಿದವು.
ಗ್ರಾಮದ ಪಕ್ಕದಲ್ಲಿರುವ ಫಕೀರನ ಕೆರೆಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ನೀರು ಹರಿದು ಬರುವ ದಾರಿಯಲ್ಲಿ ಕಸ, ಗಿಡಗಂಟಿ ಬಾರಿ ಪ್ರಮಾಣದಲ್ಲಿ ಬೆಳೆದಿದ್ದರಿಂದ ಜನತಾ ಪ್ಲಾಟ್‌ನ ರಸ್ತೆಗೆ ನುಗ್ಗಿ ಅವಾಂತರಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕಸ, ಗಿಡಗಂಟಿ ತೆರವುಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.