ಮಿಯಾಪುರದ ಶರಣಪ್ಪ ಅವರ ತೋಟದಲ್ಲಿ ಮೆಣಸಿನಕಾಯಿ ಬೆಳೆಗೆ ಹನಿ ನೀರಾವರಿ ಮೂಲಕ ನೀರುಣಿಸುತ್ತಿರುವುದು. 
ಕೊಪ್ಪಳ

ಬರದ ಮಧ್ಯೆ ಒಣಮೆಣಸಿನಕಾಯಿ ಬೆಳೆದು ಸಾಧನೆ

ಹನಿ ನೀರಾವರಿ ಬಳಸಿ ಮಿಯಾಪುರದ ಶರಣಪ್ಪ ಬೇವೂರು ಕೃಷಿ ಮೂರು ಎಕರೆಯಲ್ಲಿ ಉತ್ತಮ ಇಳುವರಿ

ಕುಷ್ಟಗಿ: ಬರಗಾಲದ ಮಧ್ಯೆ ಹನಿ ನೀರಾವರಿ ಮೂಲಕ ಬಂಪರ್ ಮೆಣಸಿನಕಾಯಿ ಬೆಳೆ ಬೆಳೆದ ಹನುಮಸಾಗರ ಹೋಬಳಿಯ ಮಿಯಾಪುರದ ರೈತ ಶರಣಪ್ಪ ಬಾಳಪ್ಪ ಬೇವೂರ ಅವರು ರೈತರಿಗೆ ಮಾದರಿಯಾಗಿದ್ದಾರೆ.

ಮೂರು ಎಕರೆ ಕೃಷಿ ಭೂಮಿಯಲ್ಲಿ ಬೇರೆ ಬೇರೆ ಬೆಳೆ ಬೆಳೆದು ಕೈ ಸುಟ್ಟುಕೊಂಡಿದ್ದ ಶರಣಪ್ಪ, ತೋಟಗಾರಿಕೆ ಇಲಾಖೆ ಸಹಕಾರದಿಂದ ಹನಿ ನೀರಾವರಿ ಸೌಲಭ್ಯ ಪಡೆದು ಕೇವಲ ಒಂದು ಇಂಚು ಬೋರ್‌ವೆಲ್ ನೀರಿನಿಂದ ಮೆಣಸಿನಕಾಯಿ ಬೆಳೆದಿದ್ದು, ಉತ್ತಮ ಇಳುವರಿ ಬಂದಿದೆ. ಜಮೀನಿನಲ್ಲಿಯೇ ಹಸಿಮೆಣಸಿನಕಾಯಿ ಕೆಜಿಗೆ 80 ರೂ. ಯಂತೆ ವ್ಯಾಪಾರಿಗಳು ಖರೀದಿಸಲು ಮುಂದಾಗಿರುವುದು ವಿಶೇಷ.

ಸಿಂಜೆಂಟಾ ಎಚ್‌ಪಿಎಚ್-5531 ಎಂಬ ಮೆಣಸಿನಕಾಯಿ ತಳಿಯ ಬೀಜವನ್ನು ರಾಣೆಬೆನ್ನೂರಿನಿಂದ ತಂದು ಬಿತ್ತನೆ ಮಾಡಿದ್ದು, ಕೇವಲ ಮೂರು ತಿಂಗಳಲ್ಲಿ ಬೆಳೆ ಕೈಗೆ ಬಂದಿದೆ. ಹಸಿರು ಮತ್ತು ಒಣ ಮೆಣಸಿನಕಾಯಿ ಎರಡಕ್ಕೂ ಸೂಕ್ತವಾದ, ಹೆಚ್ಚಿನ ಇಳುವರಿ ನೀಡುವ ಹೈಬ್ರಿಡ್ ಮೆಣಸಿನಕಾಯಿ ತಳಿಯಾಗಿದೆ. ಎರಡು ಟನ್ ಮೆಣಸಿನಕಾಯಿ ಬಂದಿದೆ. ಹೆಚ್ಚು ಖರ್ಚಿಲ್ಲದ ಹನಿ ನೀರಾವರಿ ಮೂಲಕ ಬೆಳೆಯಬಹುದಾಗಿದ್ದು, ರೈತರು ಬೆಳೆದು ಲಾಭ ಕಂಡುಕೊಳ್ಳಬಹುದು ಎಂದು ತಿಳಿಸುವ ಶರಣಪ್ಪ, ಮೂರು ಎಕರೆಯಲ್ಲಿ ಬೆಳೆದ ಒಣಮೆಣಸಿನಕಾಯಿಂದ ಅಂದಾಜು 13 ಲಕ್ಷ ರೂ. ಬಂದಿದೆ ಎನ್ನುತ್ತಾರೆ.

ಕಾಯಿಗಳು ಆರಂಭದಲ್ಲಿ ಮಧ್ಯಮ ಹಸಿರು ಬಣ್ಣದಲ್ಲಿದ್ದು, ಮಾಗಿದ ನಂತರ ಗಾಢವಾದ ಮತ್ತು ಆಕರ್ಷಕ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಒಣಗಿದ ಕಾಯಿಗಳು ಮಧ್ಯಮ ಸುಕ್ಕುಗಟ್ಟಿದ ಮೇಲ್ಮೈಯನ್ನು ಹೊಂದಿರುತ್ತವೆ. ಕಾಯಿಗಳು ಸಾಮಾನ್ಯವಾಗಿ 10 ರಿಂದ 15 ಸೆಂ.ಮೀ. ಉದ್ದವಿರುತ್ತವೆ. ಇದು ಮಧ್ಯಮ ಪ್ರಮಾಣದ ಖಾರ ಮತ್ತು ಉತ್ತಮ ಬಣ್ಣದ ಮೌಲ್ಯವನ್ನು ಹೊಂದಿದೆ. ಗಿಡಗಳು ಸದೃಢವಾಗಿ ಬೆಳೆಯುತ್ತವೆ ಮತ್ತು ಕಾಯಿಗಳು ದಟ್ಟವಾಗಿ ಬಿಡುತ್ತವೆ. ಸಸಿ ನಾಟಿ ಮಾಡಿದ 70 ರಿಂದ 80 ದಿನಗಳಲ್ಲಿ ಮೊದಲ ಕೊಯ್ಲಿಗೆ ಬರುತ್ತದೆ. ಈ ತಳಿಯು ರೋಗ ತಡೆದುಕೊಳ್ಳುವ ಸಾಮರ್ಥ್ಯವನ್ನೂ ಹೊಂದಿದೆ.

ಕುಷ್ಟಗಿ ತಾಲೂಕಿನಲ್ಲಿ ಸುಮಾರು 50 ಎಕರೆಯಲ್ಲಿ ಮಾತ್ರ ಒಣ ಮೆಣಸಿನಕಾಯಿ ಬೆಳೆ ಬೆಳೆಯಲಾಗುತ್ತಿದೆ. ತೋಟಗಾರಿಕೆಯ ಸೌಲಭ್ಯಗಳನ್ನು ಪಡೆದುಹೆಚ್ಚಿನ ಪ್ರಮಾಣದಲ್ಲಿ ಬೆಳೆದರೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯಬಹುದು. ಈ ತಳಿಯನ್ನು ಮುಂಗಾರು ಮತ್ತು ಹಿಂಗಾರು ಎರಡೂ ಹಂಗಾಮುಗಳಲ್ಲಿ ಬೆಳೆಯಬಹುದು. ಅಲ್ಪ ಅವಧಿಯಲ್ಲಿ ಹೆಚ್ಚಿನ ಲಾಭದ ಬೆಳೆಯಾಗಿದೆ
ಶಿವಯೋಗಪ್ಪ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಕುಷ್ಟಗಿ
ಕಡಿಮೆ ಖರ್ಚು, ಕೊಟ್ಟಿಗೆ ಸೆಗಣಿ ಗೊಬ್ಬರ ಮತ್ತು ಸರ್ಕಾರ ನೀಡುವ ಗೊಬ್ಬರ ಬಳಸಿ ಮೆಣಸಿನಕಾಯಿ ಗಿಡಗಳನ್ನು ಬೆಳೆಸಲಾಗಿದೆ. ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿಗೆ ಸಹಾಯಧನ ಪಡೆದುಕೊಂಡಿದ್ದೇನೆ. ಹೆಚ್ಚು ಶ್ರಮವಲ್ಲದೆ ಬೆಳೆಯಬಹುದಾಗಿದೆ.
ಶರಣಪ್ಪ ಬೇವೂರು ರೈತ, ಮಿಯಾಪುರ
ತೋಟದಲ್ಲಿ ಬೆಳೆದ ಒಣ ಮೆಣಸಿನಕಾಯಿ ಕಟಾವು ನಂತರ ಬಿಸಿಲಿಗೆ ಒಣಗಿಸಿ ಪ್ರತ್ಯೇಕಿಸುವ ಪ್ರಕ್ರಿಯೆಯಲ್ಲಿ ರೈತ ಶರಣಪ್ಪ ಅವರೊಂದಿಗೆ ತೋಟಗಾರಿಕೆ ಅಧಿಕಾರಿ ಶಿವಯೋಗಿ.