ಶರಣಪ್ಪ ದೊಡ್ಡಮನಿ 
ಕೊಪ್ಪಳ

ನೀರಿಗಾಗಿ ಕಾರಟಗಿ ಬಂದ್ ನ.19ರಂದು

ತುಂಗಭದ್ರಾ ಎಡದಂಡೆ ಕಾಲುವೆಗೆ ಡಿ.20ರವರೆಗೆ ಹರಿಸಲು ರೈತ ಸಂಘಟನೆ ಕರೆ

ಕಾರಟಗಿ: ತುಂಗಭದ್ರಾ ಎಡದಂಡೆ ಕಾಲುವೆಗೆ ಡಿ.20ರ ತನಕ ನೀರು ಹರಿಸಬೇಕೆಂದು ಒತ್ತಾಯಿಸಿ ನ.19ರಂದು ಕಾರಟಗಿ ಬಂದ್‌ಗೆ ಕರೆ ನೀಡಲಾಗಿದೆ. ಅಂದು ಸಾವಿರಾರೂ ರೈತರು ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಶರಣಪ್ಪ ದೊಡ್ಡಮನಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾರಟಗಿ ಬಂದ್ ನಿಮಿತ್ತ ಬೆಳಗ್ಗೆ 6ರಿಂದಲೇ ರೈತರ ಹೋರಾಟ ಆರಂಭವಾಗಲಿದೆ. 31ನೇ ವಿತರಣಾ ಕಾಲುವೆ ಕಚೇರಿಯಿಂದ ನಡೆಯಲಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ತಾಲೂಕಿನ ಎಲ್ಲ ಹಳ್ಳಿಗಳಿಂದ ಸೇರಿದಂತೆ 31 ಮತ್ತು 32ನೇ ವಿತರಣಾ ಕಾಲುವೆಗಳ ವ್ಯಾಪ್ತಿಯ ಗ್ರಾಮಗಳ ರೈತರು ಪಾಲ್ಗೊಳ್ಳಲಿದ್ದಾರೆ. ನವಲಿ ವೃತ್ತಕ್ಕೆ ಆಗಮಿಸಿ ರಸ್ತೆ ಸಂಚಾರ ತಡೆಯಲಾಗುವುದು ಎಂದು ತಿಳಿಸಿದರು.

ಭತ್ತದ ಬೆಳೆಯ ಅವಧಿ ಹಾಗೂ ಕೊಯ್ಲಿನ ಸಮಯದ ಕುರಿತು ಸಚಿವರು ರೈತ ಮುಖಂಡರಿಂದ ಮಾಹಿತಿ ಪಡೆದು ನೀರು ಹರಿಸುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕಿತ್ತು. ಆದರೆ, ನೀರಾವರಿ ಸಲಹಾ ಸಮಿತಿ ವಿಫಲವಾಗಿದೆ. ನ.20, ನ.30 ಅಥವಾ ಡಿ.10ರವರೆಗೆ ಯಾವ ದಿನಾಂಕದವರೆಗೆ ನೀರು ಹರಿಸಲಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡದೆ ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಒತ್ತಾಯಿಸಲಾಗುವುದು. ಹೋರಾಟದಲ್ಲಿ ಬಿಜೆಪಿಯವರು ನಮ್ಮೊಂದಿಗೆ ಸೇರುವುದಾಗಿ ಹೇಳಿದ್ದಾರೆ. ಕೃಷಿಕರ ಹಿತಕ್ಕಾಗಿ ನಡೆಯುವ ಪ್ರತಿಭಟನೆಯಾಗಿದ್ದು, ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.