ಗಂಗಾವತಿ: ಕ್ರೀಡಾ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಮನೋಸ್ಥೈರ್ಯ ಹೆಚ್ಚಾಗಲಿದ್ದು, ಕ್ರಿಯಾಶೀಲತೆ ರೂಢಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಕೊಪ್ಪಳ ವಿವಿ ಕುಲಪತಿ ಪ್ರೊ.ಟಿ.ವಿ.ವಾರುಣಿ ಹೇಳಿದರು.
ಶ್ರೀರಾಮನಗರದ ಸಿಎನ್ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ಅಂತರ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಭಾಗದ ಕಾಲೇಜಿನಲ್ಲೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿರುವುದು ಪ್ರಶಂಸನೀಯ. ವಿಜ್ಞಾನ ಕೋರ್ಸ್ ಆರಂಭಿಸುವ ಮೂಲಕ ಗ್ರಾಮೀಣ ಭಾಗದ ಉನ್ನತ ವಿದ್ಯಾಭ್ಯಾಸಕ್ಕೆ ಆಡಳಿತ ಮಂಡಳಿ ಸಹಕಾರಿಯಾಗಿದೆ. ಕ್ರೀಡಾಸ್ಫೂರ್ತಿಯಿಂದ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆ ಮಾಡಬೇಕು ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಮಾತನಾಡಿ, ಗ್ರಾಮೀಣ ಭಾಗದ ಕಾಲೇಜಿನಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಕೂಟ ಆಯೋಜಿಸುವ ಕೆಲಸ ಆಗಬೇಕಿದೆ ಎಂದರು. ಪ್ರಾಚಾರ್ಯ ಡಾ.ಸುಂಕೇಶ್ವರ ಕರಿಗೂಳಿ ಮಾತನಾಡಿ, ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಕಾಲೇಜಿನಲ್ಲಿ ಹಲವು ಕೋರ್ಸ್ಗಳನ್ನು ಆರಂಭಿಸಲು ಸಾಧ್ಯವಾಗಿದೆ ಎಂದರು.
ಎರಡು ದಿನಗಳ ಕ್ರೀಡಾಕೂಟದಲ್ಲಿ ವಿವಿ ವ್ಯಾಪ್ತಿಯ 14 ತಂಡಗಳು, 172 ಕ್ರೀಡಾಪಟುಗಳು ಮತ್ತು 16 ಶಿಕ್ಷಣ ನಿರ್ದೇಶಕರು ಭಾಗವಹಿಸಿದ್ದಾರೆ. ಕಾಲೇಜಿನ ಭೂದಾನಿ ಚಿಲಕೂರಿ ವೆಂಕಟ ಸತ್ಯನಾರಾಯಣ, ಪ್ರಮುಖರಾದ ಶರಣಬಸವರಾಜರೆಡ್ಡಿ, ಮಹ್ಮದ್ ರಫೀ, ಮೆಹಬೂಬ್, ಸಹಾಯಕ ಪ್ರಾಧ್ಯಾಪಕರಾದ ಡಾ. ಕೆ.ವಿರೂಪಾಕ್ಷ, ವೀರೇಶ, ಡಾ.ಸರ್ರಾಜ್ ಅಹ್ಮದ್, ಎಂ.ಶಂಕ್ರಪ್ಪ, ಡಾ. ಶಶಿಕುಮಾರ ಇತರರಿದ್ದರು.