ಬಿಜಕಲ್ ಗ್ರಾಪಂ ಪಿಡಿಒ ಅವರನ್ನು ಟೆಂಗುಂಟಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.  
ಕೊಪ್ಪಳ

ಕುಡಿವ ನೀರಿಗಾಗಿ ಗ್ರಾಪಂಗೆ ಮುತ್ತಿಗೆ, ಕಚೇರಿಗೆ ಬೀಗ

ಕುಷ್ಟಗಿ: ಸಮರ್ಪಕ ಕುಡಿವ ನೀರು ಪೂರೈಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಟೆಂಗುಂಟಿ ಗ್ರಾಮಸ್ಥರು ಸೋಮವಾರ ಬಿಜಕಲ್ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಟೆಂಗುಂಟಿ ಗ್ರಾಮದಲ್ಲಿ ಕಳೆದೊಂದು ವಾರದಿಂದ ಕುಡಿವ ನೀರಿನ ಸರಬರಾಜು ಮಾಡುತ್ತಿಲ್ಲ. ಇದರಿಂದ ಜನರು ಕೆಲಸ ಬಿಟ್ಟು ಬೋರ್‌ವೆಲ್‌ಗಳಿರುವ ತೋಟಗಳತ್ತ ತಳ್ಳುವಬಂಡಿ, ಗಾಡಿಗಳಲ್ಲಿ ಕೊಡಗಳಿಂದ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಹಲವು ಸಲ ಬಂದು ತಿಳಿಸಿದರೆ ಹಾರಿಕೆ ಉತ್ತರ ನೀಡಿ ಕಳಿಸಲಾಗುತ್ತಿದೆ ಎಂದು ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಮದಲ್ಲಿ 1500ಕ್ಕೂ ಅಧಿಕ ಜನಸಂಖ್ಯೆ ಇದ್ದು, ನೀರು ಪೂರೈಸುವ ಎರಡು ಕೊಳವೆಬಾವಿಗಳಿವೆ. ಈ ಪೈಕಿ ಒಂದು ಬಹುದಿನಗಳಿಂದ ದುರಸ್ತಿಯಲ್ಲಿದೆ. ಮತ್ತೊಂದು ಮೋಟಾರ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ನೀರು ಪೂರೈಕೆ ಸ್ಥಗಿತಗೊಂಡಿದೆ. ಜತೆಗೆ ಜಲಜೀವನ್ ಮಿಷನ್ ಯೋಜನೆಯ ನಲ್ಲಿಗಳಲ್ಲಿಯೂ ನೀರು ಬರುತ್ತಿಲ್ಲ. ಕೂಡಲೇ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪಿಡಿಒ ಮಲ್ಲಿಕಾರ್ಜುನ್ ಮಳಿಮಠ. ಮಾತನಾಡಿ, ಮೋಟಾರ್ ದುರಸ್ತಿ ಕಾರ್ಯ ಆರಂಭಿಸಿದ್ದು, ಶೀಘ್ರ ನೀರು ಪೂರೈಸಲಾಗುವುದು. ಮತ್ತೊಂದು ಕೊಳವೆಬಾವಿಯನ್ನೂ ರಿಪೇರಿ ಮಾಡಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಗ್ರಾಮಸ್ಥರು ಕಚೇರಿ ಬೀಗ ತೆಗೆದು ಪ್ರತಿಭಟನೆ ಕೈಬಿಟ್ಟರು.

ಪ್ರಮುಖರಾದ ದೊಡ್ಡಪ್ಪ ಕೌದಿ, ದುರ್ಗಪ್ಪ ಮಾದರ್, ಹನುಮಂತಪ್ಪ ಮಾದರ್, ಪ್ರಭುಗೌಡ ಪಾಟೀಲ್, ಮಂಜುನಾಥ ಅಬ್ಬಿಗೇರಿ, ದೊಡ್ಡಪ್ಪ ಹಡಪದ, ರುದ್ರಗೌಡ ಮೇಟಿ, ಭೀಮಪ್ಪ ಕಂಬಳಿ, ಕುಮಾರಪ್ಪ ಹೊಸೂರು, ಅಶೋಕ್ ಅಬ್ಬಿಗೇರಿ, ಭರಮಗೌಡ ಮೇಟಿ, ಮಲ್ಲಪ್ಪ ಇತರರಿದ್ದರು.