ಕನಕಗಿರಿಯಲ್ಲಿ ಶನಿವಾರ ಏರ್ಪಡಿಸಿದ್ದ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನವನ್ನು ವಾಗ್ಮಿ ರವಿ ಕಮಲಾಪುರ ಉದ್ಘಾಟಿಸಿದರು. ಸರ್ವಾಧ್ಯಕ್ಷ ವೆಂಕಟೇಶ ಕೆ. ಜನಾದ್ರಿ, ಪ್ರಮುಖರಾದ ವಾಗೇಶ ಹಿರೇಮಠ, ಮಹಾಂತೇಶ ಸಜ್ಜನ್, ಶರಣಪ್ಪ ಭತ್ತದ್, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪಾಟೀಲ್ ಇತರರಿದ್ದರು. 
ಕೊಪ್ಪಳ

ಕನ್ನಡಿಗರಿಗೆ ಸಿಗಲಿ ಉದ್ಯೋಗಾವಕಾಶ

ವಾಗ್ಮಿ ರವಿ ಕಮಲಾಪುರ ಆಶಯ ಕನಕಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಕನಕಗಿರಿ: ರಾಜ್ಯದಲ್ಲಿ ಕನ್ನಡದಲ್ಲೇ ಶಿಕ್ಷಣ, ಉದ್ಯೋಗದಲ್ಲಿ ಕನ್ನಡಿಗರು ಹಾಗೂ ಆಡಳಿತ ಭಾಷೆ ಕನ್ನಡವಾಗಬೇಕು ಎಂಬುದು ಒತ್ತಾಯ ಮತ್ತು ಆಶಯವಾಗಿದೆ ಎಂದು ವಾಗ್ಮಿ ರವಿ ಕಮಲಾಪುರ ಅಭಿಪ್ರಾಯಪಟ್ಟರು.

ಕಸಾಪ ತಾಲೂಕು ಘಟಕದಿಂದ ಕನಕಾಚಲ ದೇವಸ್ಥಾನದ ಅನುಭಾವಿ ಚಿದಾನಂದ ಅವಧೂತರ ಮುಖ್ಯ ವೇದಿಕೆಯಲ್ಲಿ ಶನಿವಾರ ಏರ್ಪಡಿಸಿದ್ದ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಒಂದೆಡೆ ಮರಾಠಿ, ಮತ್ತೊಂದೆಡೆ ತಮಿಳು, ಉರ್ದು, ತೆಲುಗು ಭಾಷಿಕರ ನಡುವೆ ಕನ್ನಡ ನಾಡು, ನುಡಿ ಉಳಿಸುವ ಕನ್ನಡ ತೇರನ್ನು ಎಳೆದೊಯ್ಯುವ ಕೆಲಸವಾಗುತ್ತಿದೆ. ಆಂಗ್ಲ ಶಿಕ್ಷಣಕ್ಕೆ ಮೊರೆ ಹೋಗುವ ಬದಲು ಕನ್ನಡದಲ್ಲಿ ಶಿಕ್ಷಣ ಪಡೆಯಬೇಕು. ಕನ್ನಡಿಗರಿಗೆ ನಮ್ಮ ನೆಲದಲ್ಲಿಯೇ ಉದ್ಯೋಗ ದೊರೆಯಬೇಕು. ಆಡಳಿತ ಭಾಷೆ ಕನ್ನಡವಾಗಬೇಕು. ನ್ಯಾಯಾಲಯಗಳಲ್ಲಿ ಆಂಗ್ಲ ಭಾಷೆಯಲ್ಲಿ ಮಾಹಿತಿ ನೀಡಿದರೆ ಸಾಮಾನ್ಯನಿಗೆ ಅರ್ಥವಾಗುವುದಿಲ್ಲ. ನಮ್ಮ ಭಾಷೆಯಲ್ಲಿಯೇ ಮಾಹಿತಿ ತಿಳಿದು ನ್ಯಾಯ ದೊರಕಿಸಿಕೊಂಡಾಗ ಮಾತ್ರ ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ನ್ಯಾಯ ದೊರಕುತ್ತದೆ ಎಂದರು.

ಸೈನ್ಯಕ್ಕೆ ಸೇರುವ ಕನ್ನಡಿಗ ಆರು ತಿಂಗಳಲ್ಲಿ ಅಪ್ಪಟ ಹಿಂದಿ ಭಾಷೆ ಮಾತನಾಡುತ್ತಾನೆ. ಆದರೆ, ಅನ್ಯ ರಾಜ್ಯದಿಂದ ರಾಜ್ಯಕ್ಕೆ ಬಂದವರು ಹತ್ತಾರು ವರ್ಷವಾದರೂ ಅವರ ಮಾತೃ ಭಾಷೆಯ ಶೈಲಿಯಲ್ಲಿಯೇ ಕನ್ನಡವಿರುತ್ತದೆ. ಅದಕ್ಕೆ ಕನ್ನಡಿಗರು ಬೇಗನೆ ಅನ್ಯ ಭಾಷೆಯನ್ನು ಕಲಿತು ನಿರರ್ಗಳವಾಗಿ ಮಾತನಾಡುವಾಗ ಅನ್ಯ ಭಾಷಿಕರು ನಮ್ಮ ಭಾಷೆ ಮಾತನಾಡುವುದನ್ನು ಕಲಿಯಬೇಕು ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ವೆಂಕಟೇಶ ಕೆ. ಜನಾದ್ರಿ ಮಾತನಾಡಿ, ಕನ್ನಡವೆಂದರೆ ಅದು ಕೇವಲ ನುಡಿಯಲ್ಲ. ಅದು ನಮ್ಮ ಬದುಕಿನ ಪ್ರಜ್ಞೆಯಾಗಿದೆ. ಕನ್ನಡ ನಾಡಿನ ಇತಿಹಾಸ ಸುಮಾರು ಎರಡೂವರೆ ಸಾವಿರ ವರ್ಷಗಳಷ್ಟು ಹಳೆಯದಾಗಿದೆ. ವಚನಕಾರರು, ದಾಸವರೇಣ್ಯರ ಅನನ್ಯ ಕೊಡುಗೆಯಿದೆ. ಹಲವು ಸಾಹಿತಿಗಳು ಕನ್ನಡ ನಾಡು ನುಡಿಗೆ ದುಡಿದಿದ್ದಾರೆ. ಐತಿಹಾಸಿಕ ಕನಕಗಿರಿಯೂ ಶಿಲ್ಪಕಲೆಗಳಿಂದ ಕೂಡಿದ್ದು, ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿ ಸಹ ಜಯತೀರ್ಥ ರಾಜಪುರೋಹಿತರಿಂದ ಹಿಡಿದು ಹಲವು ಸಾಹಿತಿಗಳು ಇಂದು ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ ಎಂದರು.

ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಡಾ.ಚನ್ನಮಲ್ಲಸ್ವಾಮೀಜಿ, ಪಪಂ ಅಧ್ಯಕ್ಷೆ ತನುಶ್ರೀ ಟಿ.ಜೆ. ರಾಮಚಂದ್ರ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಪ್ರಮುಖರಾದ ಗಂಗಾಧರಸ್ವಾಮಿ ಕಲುಬಾಗಿಲಮಠ, ವೀರೇಶ ಸಮಗಂಡಿ, ಅನಿಲ್ ಬಿಜ್ಜಳ, ರಮೇಶ ನಾಯಕ, ವಾಗೇಶ ಹಿರೇಮಠ, ಮಹಾಂತೇಶ ಸಜ್ಜನ್, ಶರಣಪ್ಪ ಭತ್ತದ್, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪಾಟೀಲ್, ತಾಲೂಕು ಅಧ್ಯಕ್ಷ ಮೆಹಬೂಬ್ ಹುಸೇನ್ ಇತರರಿದ್ದರು.

ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ಹಗಲುವೇಷಗಾರರ ನೃತ್ಯ ಗಮನ ಸೆಳೆಯಿತು.

ಸರ್ವಾಧ್ಯಕ್ಷರ ಮೆರವಣಿಗೆ ಅದ್ದೂರಿ

ಕನ್ನಡಾಂಬೆ ಭುವನೇಶ್ವರಿ ದೇವಿ ಭಾವಚಿತ್ರದ ಜತೆಗೆ ಸಮ್ಮೇಳನದ ಸರ್ವಾಧ್ಯಕ್ಷ ವೆಂಕಟೇಶ ಕೆ. ಜನಾದ್ರಿ ದಂಪತಿಯನ್ನು ಸುವರ್ಣಗಿರಿ ಸಂಸ್ಥಾನ ವಿರಕ್ತಮಠದಿಂದ ರಾಜಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಗೆ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು. ಹಗಲುವೇಷ, ನಂದಿಕೋಲು, ತಾಷರಾಂಡೋಲ್, ಡೊಳ್ಳು ಕುಣಿತ ಗಮನ ಸೆಳೆಯಿತು. ಮಹಿಳೆಯರು ಕುಂಭಗಳನ್ನು ಹೊತ್ತು ಭಾಗವಹಿಸಿದ್ದರು.