ಕೊಪ್ಪಳ: ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಅ.17 ಹಾಗೂ 18ರಂದು ಕೊಪ್ಪಳ ದಸರಾ-ದಾಂಡಿಯಾ ಉತ್ಸವವನ್ನು ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಪ್ರತಿಯೊಬ್ಬರಿಗೂ ಮೈಸೂರು ದಸರಾಗೆ ತೆರಳಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಜನರು ದಸರಾ ಸಂಭ್ರಮ ಅನುಭವಿಸಲು ಹಾಗೂ ಸಮಾಜದ ಶಾಂತಿ, ಒಳಿತಿಗಾಗಿ ಪ್ರಾರ್ಥಿಸಲು ಕಾರ್ಯಕ್ರಮ ರೂಪಿಸಲಾಗಿದೆ. ದುರ್ಗಾದೇವಿ ಪ್ರತಿಷ್ಠಾಪನೆ, ಪೂಜೆ, ದುರ್ಗಾ ಆರತಿ ಹಾಗೂ ಪ್ರಖ್ಯಾತ ದಾಂಡಿಯಾ ನೃತ್ಯ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಹ್ಯಾಟಿ ಗ್ರಾಮದಲ್ಲಿ ನಡೆದ ಘಟನೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕೊಪ್ಪಳದಲ್ಲಿ ಯಾವುದೇ ರಾಜಕೀಯ ಸಂಘರ್ಷ ಇರಲಿಲ್ಲ. ಆದರೆ, ನನ್ನನ್ನು ಮೂರನೇ ಸಲ ಶಾಸಕನನ್ನಾಗಿ ಆಯ್ಕೆ ಮಾಡಿರುವುದನ್ನು ಸಹಿಸದ ಬಿಜೆಪಿ, ಜೆಡಿಎಸ್ ನಾಯಕರು ಕ್ಷುಲ್ಲಕ ಕೃತ್ಯಗಳ ಮೂಲಕ ಯುವಕರನ್ನು ಎತ್ತಿಕಟ್ಟುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರಶ್ನಿಸಲು ಒಂದು ಪದ್ಧತಿ ಇದೆ. ಅದನ್ನು ಬಿಟ್ಟು ರಸ್ತೆಗೆ ಬಂಡಿ ಅಡ್ಡಹಾಕಿ ಕಾರು ತಡೆಗಟ್ಟುವುದು ಎಷ್ಟು ಸರಿ? ಗಲಾಟೆ ಮಾಡಿ ಫೇಸ್‌ಬುಕ್‌ನಲ್ಲಿ ಹಾಕಿ ಪ್ರಚಾರ ಗಿಟ್ಟಿಸುವುದೇ ಇವರ ಮುಖ್ಯ ಉದ್ದೇಶವಾಗಿದೆ. ಚರಂಡಿ ಸ್ವಚ್ಛಗೊಳಿಸುವುದು ಗ್ರಾಪಂ ವ್ಯಾಪ್ತಿಗೆ ಬರುವ ಕೆಲಸವೇ ಹೊರತು ಶಾಸಕರದ್ದಲ್ಲ. ನಾಯಕರಾಗಬೇಕಾದರೆ ಜನರ ಪ್ರೀತಿ ಗಳಿಸಬೇಕೇ ಹೊರತು ಇಂತಹ ಕೃತ್ಯಗಳಿಂದಲ್ಲ ಎಂದು ಶಾಸಕ ಹಿಟ್ನಾಳ ಆಕ್ರೋಶ ವ್ಯಕ್ತಪಡಿಸಿದರು.