ಕಂಪಸಾಗರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಗೋಡೆಯ ಮೇಲೆ ಬಿಡಿಸಿರುವ ವರ್ಲಿ ಶೈಲಿಯ ಚಿತ್ರ.  
ಕೊಪ್ಪಳ

ಮಕ್ಕಳ ಕಲಿಕಾಸಕ್ತಿಗೆ ವರ್ಲಿ ಕಲೆ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಶಾಲೆಗಳ ಗೋಡೆಮೇಲೆ ನಾನಾ ಚಿತ್ರ
  • ಅತಿಥಿ ಶಿಕ್ಷಕನಿಂದ ಕಲಾಸೇವೆ
ಮುನಿರಾಬಾದ್: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕಾಸಕ್ತಿಗಾಗಿ ಇಲ್ಲೊಬ್ಬ ಅತಿಥಿ ಶಿಕ್ಷಕ ಶಾಲೆ ಗೋಡೆ ಮೇಲೆ ವರ್ಲಿ ಶೈಲಿಯ ಚಿತ್ರಕಲೆಯನ್ನು ಬಿಡಿಸುತ್ತಿದ್ದು, ಗೋಡೆಗಳು ಆಕರ್ಷಣೀಯವಾಗಿ ಕಾಣುತ್ತಿವೆ.
ಸಮೀಪದ ಕಂಪಸಾಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಗಳು ವರ್ಲಿ ಕಲೆಯಿಂದ ಕಂಗೊಳಿಸುತ್ತಿದ್ದು, ಮಕ್ಕಳನ್ನು ತನ್ನತ್ತ ಆಕರ್ಷಿಸುತ್ತಿದೆ. ಹೌದು, ಹೊಸಬಂಡಿ ಹರ್ಲಾಪುರ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ, ಕಲಾವಿದ ಕಳಕೇಶ್ ಶಿವಾನಂದ ಪಂಥರ್ ಅವರು, ತಮ್ಮ ಬಿಡುವಿನ ವೇಳೆಯಲ್ಲಿ ಸರ್ಕಾರಿ ಶಾಲೆಗಳ ಆವರಣ ಆಕರ್ಷಣೀಯವಾಗಿಸಲು ಈ ವಿನೂತನ ಪ್ರಯತ್ನ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಬುಡಕಟ್ಟು ಜನಾಂಗದ ಸುಪ್ರಸಿದ್ಧ ‘ವರ್ಲಿ’ ಕಲೆಯನ್ನು ಶಾಲೆಯ ಗೋಡೆಗಳ ಮೇಲೆ ಬಿಡಿಸುವ ಮೂಲಕ ಮಕ್ಕಳಿಗೆ ಕಲಿಕೆಯ ಜತೆಗೆ ಕಲೆಯ ಮೇಲಿನ ಆಸಕ್ತಿ ಮೂಡಿಸುತ್ತಿದ್ದಾರೆ.
‘ವರ್ಲಿ’ ಚಿತ್ರಗಳಲ್ಲಿ ಗ್ರಾಮೀಣ ಜೀವನ, ಹಬ್ಬ-ಹರಿದಿನಗಳ ಆಚರಣೆ, ಪ್ರಕೃತಿ, ಜೀವಸಂಕುಲ, ವಿವಿಧ ಕಲಾಪ್ರಕಾರಗಳು ಮತ್ತು ಶಾಲೆಯಲ್ಲಿ ನಡೆಯುವ ಪ್ರತಿಭಾ ಕಾರಂಜಿ, ವಿಜ್ಞಾನ ವಸ್ತು ಪ್ರದರ್ಶನ, ಕಲಿಕಾ ಮೇಳಗಳನ್ನು ಬಿಂಬಿಸುವ ಚಿತ್ರಗಳನ್ನು ಬಿಡಿಸಿದ್ದು, ಬಣಗುಡುತ್ತಿದ್ದ ಗೋಡೆಗಳು ಈಗ ಚಿತ್ತಾರಭರಿತವಾಗಿವೆ. ಮಕ್ಕಳು ಶಾಲೆಗೆ ಬರಲು ಹೆಚ್ಚು ಉತ್ಸುಕರಾಗಿದ್ದಾರೆ.
ನಾನಾ ಶಾಲೆಗಳಿಗೆ ಉಚಿತ ಸೇವೆ: ಅತಿಥಿ ಶಿಕ್ಷಕ, ಕಲಾವಿದ ಕಳಕೇಶ್ ಅವರು, ಕೊಪ್ಪಳ ತಾಲೂಕಿನ ಮಹ್ಮದನಗರ, ಕವಳಿ, ಹಳೇ ಬಂಡಿ ಹರ್ಲಾಪುರ, ಕಂಪಸಾಗರ, ಹೊಸ ಬಂಡಿಹರ್ಲಾಪುರ (ನಲಿ-ಕಲಿ)ದಲ್ಲಿ ‘ವರ್ಲಿ’ ವರ್ಣ ಚಿತ್ರಗಳನ್ನು ಯಾವುದೇ ಶುಲ್ಕ ತೆಗೆದುಕೊಳ್ಳದೆ ಉಚಿತವಾಗಿ ಬಿಡಿಸಿದ್ದಾರೆ. ಮಕ್ಕಳ ಕಲಿಕಾ ಹಿತದೃಷ್ಟಿಯಿಂದ ಅವರ ಜ್ಞಾನಾರ್ಜನೆಗೆ ಕಲೆಯಲ್ಲಿನ ವಿಷಯಗಳು ಪೂರಕವಾಗಲಿವೆ ಎನ್ನುತ್ತಾರೆ ಅತಿಥಿ ಶಿಕ್ಷಕ, ಕಲಾವಿದ ಕಳಕೇಶ್.
"

ನಾನು ವಿದ್ಯಾರ್ಥಿಯಾಗಿದ್ದಾಗ ನಮ್ಮ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ ಮಹಾದೇವಪ್ಪ ವಂದಾಲ್ ಅವರು ವರ್ಲಿ ಶೈಲಿಯ ಚಿತ್ರಗಳನ್ನು ಬಿಡಿಸುತ್ತಿದ್ದರು. ಅವರಿಂದ ಪ್ರೇರಿಪಿತನಾಗಿ ನಾನು ಸಹ ವರ್ಲಿ ಕಲೆಯನ್ನು ಕಲಿತು, ಸರ್ಕಾರಿ ಶಾಲೆಗಳಲ್ಲಿ ಚಿತ್ರಗಳನ್ನು ಬಿಡಿಸುತ್ತಿದ್ದೇನೆ. ಮಕ್ಕಳ ಕಲಿಕೆ ಈ ಪೂರಕವಾಗಿದೆ.

"

ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆ ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವುದನ್ನು ಈ ಕಲಾವಿದ, ಶಿಕ್ಷಕ ತೋರಿಸಿಕೊಟ್ಟಿದ್ದಾರೆ. ಅವರ ಕಾರ್ಯ ಶ್ಲಾಘನೀಯ. ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು.