ಘನತ್ಯಾಜ್ಯ ವಿಲೇವಾರಿ ಕುರಿತು ನಗರಸಭೆ ನೈರ್ಮಲೀಕರಣ ಮತ್ತು ಇಂಜಿನಿಯರಿಂಗ್ ವಿಭಾಗದಿಂದ ಗಂಗಾವತಿ ಎಪಿಎಂಸಿ ಬಳಿ ಹಮ್ಮಿಕೊಂಡ ಪ್ರಾಯೋಗಿಕ ಕಾರ್ಯಾಗಾರವನ್ನು ಅಧಿಕಾರಿಗಳ ತಂಡ ಬುಧವಾರ ಪರಿಶೀಲಿಸಿತು. ಆರೋಗ್ಯ ನಿರೀಕ್ಷಕ ಎ.ನಾಗರಾಜ್, ಪರಿಸರ ಇಂಜಿನಿಯರ್ ಶರಣಪ್ಪ, ನೈರ್ಮಲ್ಯ ನಿರೀಕ್ಷಕರಾದ ಶೋಭಾ ಅಂಗಡಿ, ರಾಧಿಕಾ ಇತರರಿದ್ದರು. 
ಕೊಪ್ಪಳ

ಕಸದ ರಾಶಿಯಲ್ಲಿ ಅರಳಲಿದೆ ಚಿತ್ರಕಲೆ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಘನತ್ಯಾಜ್ಯ ವಿಲೇವಾರಿ ಜಾಗೃತಿಗೆ ನಗರಸಭೆ ವಿಶೇಷ ಕ್ರಮ
ಗಂಗಾವತಿ: ಘನತ್ಯಾಜ್ಯ ವಿಲೇವಾರಿ ಕುರಿತು ನಗರಸಭೆ ನೈರ್ಮಲೀಕರಣ ಮತ್ತು ಇಂಜಿನಿಯರಿಂಗ್ ವಿಭಾಗದಿಂದ ಹಮ್ಮಿಕೊಂಡಿದ್ದ ಪ್ರಾಯೋಗಿಕ ಕಾರ್ಯಾಗಾರವನ್ನು ಅಧಿಕಾರಿಗಳ ತಂಡ ಬುಧವಾರ ಪರಿಶೀಲಿಸಿತು.
ಸಾರ್ವಜನಿಕ ಸ್ಥಳದಲ್ಲಿ ಕಸ ಸಂಗ್ರಹ ನಿಷೇಧಿಸಿದ್ದು, ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ಯೋಜನೆಯನ್ನು ನಗರ ಜಾರಿಗೆ ತಂದಿದೆ. ಕೆಲವೆಡೆ ಕಸ ವಿಂಗಡಿಸದೇ ರಸ್ತೆ ಬದಿ ಮತ್ತು ಖಾಲಿ ಜಾಗದಲ್ಲಿ ಹಾಕುತ್ತಿದ್ದು, ಅನೈರ್ಮಲೀಕರಣಕ್ಕೆ ಕಾರಣವಾಗಿದೆ. ನಿಯಂತ್ರಣಕ್ಕಾಗಿ ಕಸ ಸಂಗ್ರಹಿತ ಪ್ರದೇಶದಲ್ಲಿ ಅಲಂಕಾರಿ ಪ್ರಾಯೋಗಿಕ ಯೋಜನೆ ಜಾರಿಗೊಳಿಸಿದ್ದು, ಇತ್ತೀಚಿಗೆ ನಿಯೋಜನೆಗೊಂಡ ಸಮುದಾಯ ಸಂಚಾಲಕರ ತಂಡ ನಿರ್ವಹಿಸುತ್ತಿದೆ. ಮೊದಲ ಹಂತದಲ್ಲಿ ಬನ್ನಿಗಿಡದ ಕ್ಯಾಂಪ್, ಎಪಿಎಂಸಿ ಮೊದಲನೇ ಗೇಟ್ ಮತ್ತು ವಾಲ್ಮೀಕಿ ವೃತ್ತದ ಬಳಿ ಕೈಗೆತ್ತಿಕೊಂಡಿದೆ.
ಈ ಬಗ್ಗೆ ಆರೋಗ್ಯ ನಿರೀಕ್ಷಕ ಎ.ನಾಗರಾಜ್ ಮಾತನಾಡಿ, ಕಸಸಂಗ್ರಹಿತ ಸಾರ್ವಜನಿಕ ಪ್ರದೇಶದಲ್ಲಿ ಇನ್ನು ಮುಂದೆ ಕಸ ಹಾಕುವಂತಿಲ್ಲ. ನಿಗಾವಹಿಸಲು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕಸ ಹಾಕುವುದು ಕಂಡು ಬಂದಲ್ಲಿ ದಂಡದ ಜತೆಗೆ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ. ಸಂಗ್ರಹಿತ ಪ್ರದೇಶ ಸುಂದರಗೊಳಿಸುವ ನಿಟ್ಟಿನಲ್ಲಿ ರಂಗೋಲಿ ಹಾಕಿ ಗಮನಸೆಳೆಯಲಾಗಿತ್ತು. ಹೊಸದಾಗಿ ಅಲಂಕಾರಿಕ ಕಾಮಗಾರಿ ಕೈಗೆತ್ತಿಕೊಂಡಿದ್ದು, ಕಸದಲ್ಲಿ ಸಿಕ್ಕ ಮರುಬಳಕೆಯ ವಸ್ತುಗಳೊಂದಿಗೆ ವಿಭಿನ್ನ ಚಿತ್ರ ಕಲೆಯ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಾಯೋಗಿಕ ಯೋಜನೆಗೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದ್ದು, ನಗರ ಸ್ವಚ್ಛತೆಗೆ ಕೈಜೋಡಿಸುವಂತೆ ಸಲಹೆ ನೀಡಿದರು. ಯೋಜನೆ ಮೆಚ್ಚಿದ ಹೂವಿನ ವ್ಯಾಪಾರಿ ವಿರೂಪಾಕ್ಷಿ, ಪ್ರಾಯೋಗಿಕ ಕಾಮಗಾರಿಗೆ 5ಸಾವಿರ ರೂ. ನೆರವು ನೀಡಲು ಒಪ್ಪಿಕೊಂಡರು.
ಪರಿಸರ ಇಂಜಿನಿಯರ್ ಶರಣಪ್ಪ, ನೈರ್ಮಲ್ಯ ನಿರೀಕ್ಷಕರಾದ ಶೋಭಾ ಅಂಗಡಿ, ರಾಧಿಕಾರ, ಸಿಬ್ಬಂದಿ ರಾಮಣ್ಣ, ರಫಿಕ್, ದುರುಗಪ್ಪ, ಗಂಗಪ್ಪ, ಮೋಯಿನ್ ಪಟೇಲ್ ಸಮುದಾಯ ಸಂಚಾಲಕರಾದ ದೀಪಾ, ವಿಜಯಲಕ್ಷ್ಮೀ ಇತರರಿದ್ದರು.