ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಶ್ರೀ ಶುಕಮುನಿ ಸ್ವಾಮಿ ದೇವಸ್ಥಾನ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಪ್ರಯುಕ್ತ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ್, ಕಸಾಪ ತಾಲೂಕು ಅಧ್ಯಕ್ಷ ಲೆಂಕಪ್ಪ ವಾಲೇಕಾರ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಕಂಟ್ಲಿ, ಚುಸಾಪ ತಾಲೂಕಾಧ್ಯಕ್ಷ ಮಹೇಶ ಹಡಪದ ಇದ್ದರು.
ಕುಷ್ಟಗಿ: ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಸಮಾಜದ ಅಭಿವೃದ್ಧಿಗೆ ಪ್ರಮುಖ ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ ಎಂದು ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ್ ಹೇಳಿದರು.
ತಾಲೂಕಿನ ದೋಟಿಹಾಳ ಶ್ರೀ ಶುಕಮುನಿ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ವಿಪಿಕೆ ಫೌಂಡೇಷನ್, ಶ್ರೀ ದಯಾನಂದಪುರಿ ಸಂಘ, ಗಾಯತ್ರಿ ಮಹಿಳಾ ಸಂಘ, ದೋಟಿಹಾಳ ಗ್ರಾಪಂ, ಆರೋಗ್ಯ ಕೇಂದ್ರ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಏರ್ಪಡಿಸಿದ್ದ ಸೀಮಂತ ಕಾರ್ಯಕ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಕಿತ್ತೂರುರಾಣಿ ಚನ್ನಮ್ಮ ಹಾಗೂ ಅಭಿನವ ಗವಿಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು. ಮಹಿಳೆಯರು ಶಿಕ್ಷಣ, ಸ್ವಾವಲಂಬನೆ ಮತ್ತು ಆತ್ಮವಿಶ್ವಾಸದ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು.
ಕಸಾಪ ತಾಲೂಕು ಅಧ್ಯಕ್ಷ ಲೆಂಕಪ್ಪ ವಾಲೇಕಾರ್ ಮಾತನಾಡಿ, ಸಾಹಿತ್ಯ, ಶಿಕ್ಷಣ, ರಾಜಕೀಯ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಮಹಿಳೆಯರು ಮುನ್ನಡೆ ಸಾಧಿಸುತ್ತಿರುವುದು ಸಮಾಜದ ಶ್ರಯೋಭಿವೃದ್ಧಿಗೆ ಪೂರಕವಾಗಿದೆ ಎಂದರು.
ಉಪ ಪ್ರಾಚಾರ್ಯ ಡಿ.ಸುರೇಶ್ ಮಾತನಾಡಿ, ಮಹಿಳೆಯರ ಹಕ್ಕುಗಳ ರಕ್ಷಣೆ ಹಾಗೂ ಸಮಾನ ಅವಕಾಶಗಳ ಕಲ್ಪನೆ
ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ 11 ಜನ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು. 27 ಜನ ಸಾಧಕರಿಗೆ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಅಭಿನವ ಗವಿಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಸಾಪ ಹೋಬಳಿ ಘಟಕದ ಅಧ್ಯಕ್ಷ ನಿಂಗಪ್ಪ ಸಜ್ಜನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಪವಾಡೆಪ್ಪ ಚೌಡ್ಕಿ, ರಾಜ್ಯಮಟ್ಟದ ಕಿತ್ತೂರು ಚನ್ನಮ್ಮ ಪ್ರಶಸ್ತಿ ಪುರಸ್ಕೃತೆ ಲಲಿತಮ್ಮ ಹಿರೇಮಠ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಕಂಟ್ಲಿ, ಚುಸಾಪ ತಾಲೂಕಾಧ್ಯಕ್ಷ ಮಹೇಶ ಹಡಪದ, ಶಾರದಾ ಶೆಟ್ಟರ್, ಗೌರಮ್ಮ ಕುಡತಿನಿ, ನಾಗರಾಜ್ ಕಾಳಗಿ, ಪರಶಿವಮೂರ್ತಿ ಮಾಟಲದಿನ್ನಿ, ಅನಿತಾ ಗೋಗಿ, ಉಮಾಪತಿ ಮಾಳಗಿ, ಸಂಗಮೇಶ ಲೂತಿಮಠ, ಚನ್ನಬಸವ ಚೌರಿ ಅಡಿವೆಮ್ಮ ಹಿರೇಮಠ ಇತರರಿದ್ದರು.