ಕನಕಗಿರಿ ಠಾಣೆಯ ಮುಂದೆ ಜಮಾಯಿಸಿರುವ ಜನತೆ.
- ಮುಗಿಲು ಮುಟ್ಟಿದ ಮಕ್ಕಳ ಆಕ್ರಂದನ
- ಪ್ರಕರಣ ಭೇದಿಸಲು 3 ಪ್ರತ್ಯೇಕ ತಂಡ
ಕನಕಗಿರಿ: ಪಟ್ಟಣವನ್ನೇ ಬೆಚ್ಚಿ ಬೀಳಿಸಿದ್ದ ಇಲ್ಲಿನ 5ನೇ ವಾರ್ಡಿನ ನಿರ್ಮಾಣ ಹಂತದಲ್ಲಿನ ಮನೆಯಲ್ಲಿ ಮಹಿಳೆಯನ್ನು ಕೊಂದು ಸಾಕ್ಷ್ಯ ನಾಶಕ್ಕಾಗಿ ಸುಟ್ಟು ಹಾಕಿದ್ದ ಪ್ರಕರಣದಲ್ಲಿ ಕೊಲೆಯಾದ ಮಹಿಳೆ ದಲಿತ ವರ್ಗಕ್ಕೆ ಸೇರಿದ್ದಾಳೆ ಎಂದು ಗುರುತಿಸಲಾಗಿದೆ. ಶಂಕಿತ ಆರೋಪಿಯನ್ನು ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೋಮವಾರ ತಡರಾತ್ರಿ ಈ ಘಟನೆ ನಡೆದ ಬಳಿಕ ಮಹಿಳೆಯ ಗುರುತು ಪತ್ತೆ ಜತೆಗೆ ಆರೋಪಿಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಪ್ರಕರಣ ಭೇದಿಸಲು 3 ಪ್ರತ್ಯೇಕ ತಂಡಗಳನ್ನು ರಚಿಸಿದ್ದು, ಸಿಸಿ ಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಆತನ ಮೂಲಕ ಕೊಲೆಯಾದ ಮಹಿಳೆ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ ಪರಿಶಿಷ್ಟ ಪಂಗಡಕ್ಕೆ ಸೇರಿದ ಕಾರಟಗಿ ಮೂಲದ ರತ್ನಮ್ಮ ಮಲ್ಲಿಕಾರ್ಜುನ ಎಂದು ತಿಳಿದು ಬಂದಿದೆ. ರತ್ನಮ್ಮ ವಿಧವೆಯಾಗಿದ್ದು, ಈಕೆಗೆ ಇಬ್ಬರು ವಿವಾಹಿತ ಪುತ್ರಿಯರಿದ್ದು, ಪುತ್ರ ಕುಷ್ಟಗಿ ತಾಲೂಕಿನ ಸಂಬಂಧಿಕರ ಮನೆಯಲ್ಲಿದ್ದಾನೆ. ರತ್ನಮ್ಮ ಕಾರಟಗಿಯಲ್ಲಿ ಕ್ಯಾಟರಿಂಗ್ ಮಾಡುತ್ತಾ ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.
ಬುಧವಾರ ಕುಟುಂಬಸ್ಥರು ಠಾಣೆಗೆ ಆಗಮಿಸಿ ಸಿಸಿ ಟಿವಿ ದೃಶ್ಯ ವೀಕ್ಷಿಸಿ ಘಟನೆ ಖಚಿತಪಡಿಸಿಕೊಂಡಿದ್ದಾರೆ. ತಾಯಿ ಹೃದಯ ವಿದ್ರಾವಕವಾಗಿ ಮೃತಪಟ್ಟ ಸುದ್ದಿ ತಿಳಿದು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ತಾಲೂಕು ಸೇರಿ ವಿವಿಧೆಡೆಯಿಂದ ಪರಿಶಿಷ್ಟ ಪಂಗಡ ಸಮಾಜದವರು ಆಗಮಿಸಿ ಘಟನೆಯನ್ನು ಖಂಡಿಸಿದರು. ಆರೋಪಿ ಕುಷ್ಟಗಿ ತಾಲೂಕಿನವನು ಎನ್ನಲಾಗಿದ್ದು, ಡಿವೈಎಸ್‌ಪಿ ಜೆ.ಎಸ್ ನ್ಯಾಮಗೌಡರ ಠಾಣೆಗೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.
ದೂರಿಗೆ ಅಟ್ರಾಸಿಟಿ ಸೇರ್ಪಡೆ: ಈಗಾಗಲೇ ಮಹಿಳೆಯ ಕೊಲೆ ಹಾಗೂ ಸಾಕ್ಷ್ಯ ನಾಶಕ್ಕೆ ಬೆಂಕಿ ಹಚ್ಚಿರುವ ಬಗ್ಗೆ ಮನೆಯ ಮಾಲೀಕ ಸಂಗನಗೌಡ ಪ್ರಕರಣ ದಾಖಲಿಸಿದ್ದಾರೆ. ಇದೀಗ ಕೊಲೆಯಾದ ಮಹಿಳೆ ಪಪಂ ವರ್ಗಕ್ಕೆ ಸೇರಿದ್ದರಿಂದ ಹೆಚ್ಚುವರಿ ಅಟ್ರಾಸಿಟಿ ಸೇರ್ಪಡೆ ಮಾಡಲಾಗುತ್ತದೆ ಎಂದು ಪಿಐ ವಿ.ನಾರಾಯಣ ತಿಳಿಸಿದ್ದಾರೆ.