ಕನಕಗಿರಿಯಲ್ಲಿ ಮಹಿಳೆಯನ್ನು ಸುಟ್ಟ ಸ್ಥಳಕ್ಕೆ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಗಳ ಚಲನ ವಲನ ಗುರುತಿಗಾಗಿ ಶ್ವಾನ ದಳ ಕಾರ್ಯಾಚರಣೆ ನಡೆಸಿತು. 
ಕೊಪ್ಪಳ

ಮಹಿಳೆ ಕೊಲೆ, ಸಾಕ್ಷೃನಾಶಕ್ಕಾಗಿ ದೇಹಕ್ಕೆ ಬೆಂಕಿ

ಪ್ರಮುಖ ಮುಖ್ಯಾಂಶಗಳು

  • ಸ್ಥಳಕ್ಕೆ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ ಭೇಟಿ
  • ನಿವಾಸಿಗರಲ್ಲಿ ಆತಂಕ
  • ಕಾಲುಗಳು ಹೊರತು ದೇಹ ಸಂಪೂರ್ಣ ಸುಟ್ಟು ಕರಕಲು
ಕನಕಗಿರಿ: ಮಹಿಳೆಯನ್ನು ಕೊಲೆ ಮಾಡಿ ಸಾಕ್ಷೃನಾಶಕ್ಕಾಗಿ ಬೆಂಕಿ ಹಚ್ಚಿ ಸುಟ್ಟಿರುವ ಹೃದಯ ವಿದ್ರಾವಕ ಘಟನೆ ಪಟ್ಟಣದ 5ನೇ ವಾರ್ಡ್‌ನ ನಿರ್ಮಾಣ ಹಂತದ ಮನೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮನೆಯ ಮಾಲೀಕ ಕುಷ್ಟಗಿ ತಾಲೂಕಿನ ಸಂಗನಗೌಡ ಎಂದಿನಂತೆ ಹೊಟೇಲ್ ಕೆಲಸ ಮುಗಿಸಿಕೊಂಡು ತಾನು ವಾಸವಾಗಿರುವ ಬಾಡಿಗೆ ಮನೆಗೆ ಬಂದಿದ್ದಾರೆ. ಆಗ ನಿರ್ಮಾಣ ಹಂತದಲ್ಲಿರುವ ಮನೆಯ ಮೇಲಿನ ರೂಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮಹಿಳೆಗೆ ಬೆಂಕಿ ಹಚ್ಚಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರು ಸ್ಥಳಕ್ಕೆ ತೆರಳಿದಾಗ ಮಹಿಳೆಗೆ ಹತ್ತಿದ್ದ ಬೆಂಕಿ ಉರಿಯುತ್ತಿತ್ತು.
ಮಹಿಳೆಗೆ ಗ್ರೀನ್ ಮ್ಯಾಟ್‌ನಿಂದ ಸುತ್ತಿ ಸುಡಲಾಗಿದ್ದು, ಕಾಲುಗಳು ಹೊರತು ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ. ಸುಮಾರು 30 ವರ್ಷದವರಾಗಿದ್ದು, ಸುಟ್ಟಿದ್ದರಿಂದ ಯಾರೆಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮನೆ ಮಾಲೀಕ ಪ್ರಕರಣ ದಾಖಲಿಸಿದ್ದಾರೆ. ಮಂಗಳವಾರ ಬೆಳಗ್ಗೆ ಶ್ವಾನದಳ, ಸೋಕೋ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಸ್ಥಳೀಯ ಠಾಣೆಯ ಪಿಐ ರಜೆ ಇರುವ ಹಿನ್ನೆಲೆಯಲ್ಲಿ ಕಾರಟಗಿ ಪಿಐ ಸುಧೀರ್ ಬೆಂಕಿ ಕಾನೂನು ಪ್ರಕ್ರಿಯೆ ಮುಂದುವರಿಸಿದ್ದಾರೆ. ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ. ಈ ಘಟನೆ ಸುತ್ತಲಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.