ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆ ಅಪಘಾತದಲ್ಲಿ ಭತ್ತದ ಗದ್ದೆಗೆ ಉರುಳಿದ ಆಟೋ. 
ಕೊಪ್ಪಳ

ಆಟೋ ಉರುಳಿಬಿದ್ದು ಮಹಿಳೆ ಸಾವು

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಗಾಯಾಳುಗಳಿಗೆ ನೆರವಾದ ಮಾಜಿ ಶಾಸಕ
ಗಂಗಾವತಿ: ತಾಲೂಕಿನ ಚಿಕ್ಕಬೆಣಕಲ್ ಬಳಿ ರಾಜ್ಯ ಹೆದ್ದಾರಿಯಲ್ಲಿ ಎರಡು ಆಟೋಗಳು ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಯುವತಿ ಮೃತಪಟ್ಟಿದ್ದು, 17ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ನಗರದ ಮಹೆಬೂಬ್ ನಗರದ ನಿವಾಸಿ ರುಬೀನಾ (25) ಮೃತ ಯುವತಿ. ತೀವ್ರ ಗಾಯಗೊಂಡ ಅಯೇಷಾ ಮತ್ತು ಮಿನಿಯಾಜ್‌ರನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್‌ಗೆ ರವಾನಿಸಲಾಗಿದೆ. ನಗರದ ಖಾಜಾಬೀ, ಮಹಾಬೀ, ಮುಜ್ನಿ, ಸುಮೇಯಾ, ಆಯೇಷಾ ಬೇಗಂ, ರಂಜಾನ್ ಬೀ, ಸಾಜೀಯಾ, ರಹೇಮತ್ ಬಿ, ಮಹೇಬೂಬಿ, ತಾಹೇರಾ, ಮಹೆಬೂಬ, ರಸೂಲಸಾಬ, ಖಾಸೀಂಸಾಬ ಆಟೋ ಚಾಲಕ ಹಿರೇಭೀಮಪ್ಪ ಗಾಯಗೊಂಡಿದ್ದು, ನಗರ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ. ರಂಜಾನ್ ಹಬ್ಬದಲ್ಲಿ ಮೊದಲ ಬಾರಿಗೆ ವ್ರತ ಕೈಗೊಳ್ಳುವ ಕುಟುಂಬ ಸದಸ್ಯರಿಗೆ ಹೂವು ಮುಡಿಸುವ ಸಂಪ್ರದಾಯವಿದ್ದು, ಅದಕ್ಕಾಗಿ ಗಂಗಾವತಿಯ ಒಂದೇ ಕುಟುಂಬಕ್ಕೆ ಸೇರಿದವರು ಎರಡು ಆಟೋಗಳಲ್ಲಿ ಕೊಪ್ಪಳಕ್ಕೆ ತೆರಳುತ್ತಿದ್ದರೆನ್ನಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತಮ ಚಿಕಿತ್ಸೆ ನೀಡಲು ಸೂಚನೆ

ಅಪಘಾತ ನಡೆದ ಹೆದ್ದಾರಿಯಲ್ಲಿ ಗ್ರಾಮವೊಂದರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ಸಾಗುತ್ತಿದ್ದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಗಾಯಾಳುಗಳಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಉಪವಿಭಾಗ ಆಸ್ಪತ್ರೆಯ ಆಂಬುಲೆನ್ಸ್ ವಿಭಾಗಕ್ಕೆ ದೂರವಾಣಿ ಮೂಲಕ ಕರೆ ಮಾಡಿ, ಆಂಬುಲೆನ್ಸ್ ವ್ಯವಸ್ಥೆ ಮಾಡಿದರಲ್ಲದೇ, ಕೆಲ ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ಯದಿದ್ದಾರೆ. ಇನ್ನೂ ಕೆಲವರನ್ನು ಖಾಸಗಿ ವಾಹನದಲ್ಲಿ ಕಳುಹಿಸಿಕೊಡುವ ಮೂಲಕ ನೊಂದವರಿಗೆ ನೆರವಾಗಿದ್ದಾರೆ. ಆಸ್ಪತ್ರೆ ವೈದ್ಯಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.