ಗಂಗಾವತಿಯಲ್ಲಿ ಕರವೇ ಕಾರ್ಯಕರ್ತರು ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಪಂಪಣ್ಣನಾಯಕ, ವಿವಿಧ ಘಟಕಗಳ ಪದಾಧಿಕಾರಿಗಳಾದ ಹುಸೇನ್‌ಸಾಬ್, ಶಂಕರ ಪೂಜಾರಿ, ಹಸನ್‌ಸಾಬ ಮುದ್ಗಲ್, ಪುಂಡಲೀಕ, ಶರಣು ನಾಯಕ, ವೆಂಕಟೇಶ, ಪರಶುರಾಂ, ಕಷ್ಣ, ಅಕ್ರಂಸಾಬ್, ಇಮಾಮ್‌ಸಾಬ್ ಇತರರಿದ್ದರು.
- ಕರವೇ ಕಾರ್ಯಕರ್ತರು ಒತ್ತಾಯ
- ಗಂಗಾವತಿಯಲ್ಲಿ ಪ್ರತಿಭಟನೆ ಪೌರಾಯುಕ್ತಗೆ ಮನವಿ
ಗಂಗಾವತಿ: ನಗರದ ಜುಲಾಯಿನಗರ ವೃತ್ತದ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ಕರವೇ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ನಗರದ ನಗರಸಭೆ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿಗೆ ಮನವಿ ಸಲ್ಲಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಪಂಪಣ್ಣನಾಯಕ ಮಾತನಾಡಿ, ವೃತ್ತದ ವ್ಯಾಪ್ತಿಯಲ್ಲಿ ಆಸ್ಪತ್ರೆ, ಶಾಲೆ, ಪ್ರಮುಖ ಅಂಗಡಿ, ಆಟೋ ನಿಲ್ದಾಣ ಸೇರಿ ಹಲವು ವಹಿವಾಟು ಕೇಂದ್ರಗಳಿದ್ದು, ರಸ್ತೆ ಅವ್ಯವಸ್ಥೆ, ಧೂಳಿನಿಂದ ಆವರಿಸಿಕೊಂಡಿದೆ. ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖದ ವೃತ್ತವಾಗಿದ್ದು, ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ.
ಮಿತಿ ಮೀರಿದ ಧೂಳಿನಿಂದ ಅಸ್ತಮಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಕೋರ್ಟ್ ವ್ಯಾಜ್ಯ ನೆಪದಲ್ಲಿ ದುರಸ್ತಿಗೆ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದು, ತ್ವರಿತಗತಿಯಲ್ಲಿ ಇತ್ಯರ್ಥಕ್ಕೆ ನಗರಸಭೆ ಮುಂದಾಗಬೇಕಿದೆ. ಕಾಮಗಾರಿ ಆರಂಭವಾಗುವರೆಗೂ ರಸ್ತೆಗೆ ನಿತ್ಯವೂ ಮೂರು ಬಾರಿ ನೀರು ಹಾಕುವ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.