ಶಿವರಾಜ ತಂಗಡಗಿ, ಬಸವರಾಜ ರಾಯರಡ್ಡಿ, ರಾವೇಂದ್ರ ಹಿಟ್ನಾಳ.
- ಶಿವ, ಬಸವ , ರಾವೇಂದ್ರ ಪೈಪೋಟಿ
- ಸಿಎಂ ರಾಜೀನಾಮೆ ಬೆನ್ನಲ್ಲೇ ಹೆಚ್ಚಿದ ಚರ್ಚೆ
ಕೊಪ್ಪಳ : ಕಾಂಗ್ರೆಸ್ ಹೈ ಕಮಾಂಡ್ನ ಯೋಜಿತ ನಿರ್ದೇಶನದಂತೆ ಸಿದ್ದರಾಮಯ್ಯ ಸಿಎಂ ಸ್ಥಾನ ತೊರೆದಿದ್ದಾರೆ. ನೂತನ ಸಿಎಂ ಆಯ್ಕೆ ಜತೆಗೆ ಸಚಿವ ಸಂಪುಟ ಮರು ರಚನೆಗೆ ವೇದಿಕೆ ಸಜ್ಜುಗೊಂಡಿದೆ. ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು ಹಲವು ಲೆಕ್ಕಾಚಾರಗಳಲ್ಲಿ ಮಂತ್ರಿಗಿರಿಗೆ ಅರ್ಹರಾಗಿದ್ದು, ನೂತನ ಸಂಪುಟ ಸಾರಥಿ ಹಾಗೂ ಕೈ ವರಿಷ್ಠರ ಆಶೀರ್ವಾದ ಯಾರ್ಯಾರಿಗೆ ದೊರೆಯಲಿದೆ ಎಂಬ ಚರ್ಚೆ ಹುಟ್ಟು ಹಾಕಿದೆ.
ಯಲಬುರ್ಗಾದ ಬಸವರಾಜ ರಾಯರಡ್ಡಿ, ಕನಕಗಿರಿಯ ಶಿವರಾಜ ತಂಗಡಗಿ ಹಾಗೂ ಜಿಲ್ಲಾ ಕೇಂದ್ರ ಕೊಪ್ಪಳ ಕ್ಷೇತ್ರವನ್ನು ರಾವೇಂದ್ರ ಹಿಟ್ನಾಳ ಪ್ರತಿನಿಧಿಸುತ್ತಿದ್ದಾರೆ. ರಾಯರಡ್ಡಿ ಮಂತ್ರಿಯಾದ ಅನುಭವದ ಜತೆಗೆ ಸಿಎಂ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದು ಅನುಭವಿ ರಾಜಕಾರಣ ಎನಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು ಕೊನೇ ಕ್ಷಣದವರೆಗೂ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರೆಯಲಿ ಎಂದು ಬಯಸಿದ್ದಾರೆ. ಮುಖ್ಯಮಂತ್ರಿ ಬದಲಾದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆಗೆ ಅವಕಾಶ ದೊರೆಯಲಿ. ಸಂಪುಟ ಮರು ರಚಿಸಿ ಹೊಸಬರಿಗೂ ಅವಕಾಶ ಕೊಡಿ ಎಂದು ಆಗಾಗ ಸಲಹೆ ನೀಡಿದ್ದಾರೆ.
ನೇರವಾಗಿ ಸಚಿವಗಿರಿ ನೀಡಿ ಎಂದು ಕೇಳುವ ಬದಲು ಪರೋಕ್ಷ ಪ್ರಯತ್ನ ನಡೆಸಿರುವುದು ಹೊಸ ವಿಷಯವೇನಲ್ಲ. ಹಿರಿತನ, ಬುದ್ಧಿವಂತಿಕೆ, ಉತ್ತಮ ಭಾಷಾ ಕೌಶಲ್ಯ, ಹೈಕಮಾಂಡ್ನೊಂದಿಗಿನ ನಂಟು ರಾಯರಡ್ಡಿ ಪ್ಲಸ್ ಪಾಯಿಂಟ್ಗಳು. ಆದರೆ, ಜಾತಿ ಆಧಾರಿತ ಲೆಕ್ಕಾಚಾಗಳು, ಹೈಕಮಾಂಡ್ ನಿರ್ಧಾರ ನೂತನ ಸಿಎಂ ಆಗುವವರು ರಾಯರಡ್ಡಿ ಸಂಪುಟ ಎಂಟ್ರಿಗೆ ಅವಕಾಶ ಮಾಡಿಕೊಡುವುದಾ ಎಂಬ ಕುತೂಹಲ ಕೆರಳಿಸಿದೆ.
ಇನ್ನು ಅದೃಷ್ಟವಂತ ರಾಜಕಾರಣಿ ಎನಿಸಿಕೊಂಡಿರುವ ಶಿವರಾಜ ತಂಗಡಗಿ, ಗೆದ್ದಾಗಲೊಮ್ಮೆ ಸಚಿವ ಸ್ಥಾನ ಹುಡುಕಿ ಬಂದಿದೆ. ಜಾತಿ ಲೆಕ್ಕಾಚಾರ, ಸಾಮಾಜಿಕ ನ್ಯಾಯ, ಜಿಲ್ಲಾವಾರು ಕೋಟಾ ಎಲ್ಲವೂ ಅವರಿಗೆ ಅದೃಷ್ಟದ ಬಾಗಿಲು ತೆರೆಸಿವೆ. ಇವೇ ಕಾರಣಗಳು ಸಂಪುಟ ಪುನಾಚರನೆ ಆದರೂ ಅವರಿಗೆ ಮಂತ್ರಿ ಸ್ಥಾನ ಅಬಾಧಿತಗೊಳಿಸಲಿವೆ ಎನ್ನಲಾಗುತ್ತಿದೆ. ಇದ್ದ ಖಾತೆ ಬದಲು ಅನ್ಯ ಖಾತೆ ಜವಾಬ್ದಾರಿ ನೀಡಬಹುದೆಂಬ ಚರ್ಚೆಗಳು ಅವರ ಆಪ್ತ ವಲಯ ಹಾಗೂ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಬೆಂಗಳೂರಿನಲ್ಲೇ ಠಿಕಾಣಿ ಹೂಡಿರುವ ತಂಗಡಗಿ ತಮ್ಮ ಸ್ಥಾನ ಉಳಿಸಿಕೊಳ್ಳಲು ವೇದಿಕೆ ಸಜ್ಜುಗೊಳಿಸಿಕೊಂಡಿದ್ದು ಪ್ರಯತ್ನ ಮುಂದುವರೆಸಿದ್ದಾರೆ.
ಬದಲಾಗುವುದೇ ಕೊಪ್ಪಳದ ಇತಿಹಾಸ ?
ಜಿಲ್ಲಾ ಕೇಂದ್ರ ಕೊಪ್ಪಳ ಕ್ಷೇತ್ರದಲ್ಲಿ ಗೆದ್ದವರಿಗೆ ಈವರೆಗೂ ಮಂತ್ರಿಭಾಗ್ಯ ಒಲಿದಿಲ್ಲ. ಜಿಲ್ಲೆಯಾಗಿ 27 ವರ್ಷ ಗತಿಸಿದ್ದು ಒಮ್ಮೆಯೂ ಇಲ್ಲಿ ವಿಜಯಶಾಲಿ ಆದವರು ಸಚಿವರಾಗಿಲ್ಲ. ಹಿಂದೊಮ್ಮೆ ಅಗಡಿ ವಿರುಪಾಕ್ಷ ಅವರು ಸಚಿವರಾದರೂ ಅವರು ಕೊಪ್ಪಳಕ್ಕೆ ಮರಳಿ ಬರುವುದರೊಳಗೆ ಸರ್ಕಾರ ಪತನವಾಗಿದ್ದರಿಂದ ಅವಕಾಶ ತಪು$್ಪವಂತಾಗಿದೆ. ಸದ್ಯ 2013ರಿಂದ ಶಾಸಕ ರಾವೇಂದ್ರ ಹಿಟ್ನಾಳ ಮೂರು ಅವಧಿಗೆ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ತಮ್ಮ ಚಾಣಾಕ್ಷತೆಯಿಂದ ರಾಜ್ಯ ನಾಯಕರೊಂದಿಗೆ ಉತ್ತಮ ಭಾಂದವ್ಯ ಬೆಳೆಸಿಕೊಂಡಿದ್ದಾರೆ. ರಾಬಕೊವಿ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದು, ಕೆಎಂಎ್ ಗಾದಿ ಮೇಲೆ ಕಣ್ಣಿಟ್ಟಿದ್ದಾರೆ. ಮತ್ತೊಂದೆಡೆ ಸಚಿವಗಿರಿಗೆ ಲಾಭಿ ನಡೆಸಿದ್ದು, ಸಹೋದರ ಸಂಸದ ರಾಜಶೇಖರ ಹಿಟ್ನಾಳ, ತಂದೆ ಮಾಜಿ ಶಾಸಕ ಬಸವರಾಜ ಹಿಟ್ನಾಳ ರಾಜಕೀಯ ಪ್ರಭಾವ ಬಳಸಿ ಮಂತ್ರಿಗಿರಿಗೆ ಅರ್ಜಿ ಗುಜರಾಯಿಸಿದ್ದಾರೆ. ಯುವಕ ಹಾಗೂ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಕುರುಬ ಸಮುದಾಯ ಕೋಟಾದಡಿ ಹಕ್ಕು ಮಂಡಿಸುತ್ತಿದ್ದು ಮಂತ್ರಿಯಾಗಿ ಕೊಪ್ಪಳದ ಇತಿಹಾಸ ಬದಲಾಯಿಸುವರಾ ಎಂಬ ಕುತೂಹಲ ಜಿಲ್ಲೆಯ ರಾಜಕಾರಣದಲ್ಲಿ ಮನೆ ಮಾಡಿದೆ.