ಕಾರಟಗಿಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ಅಂಗವಾಗಿ ಭಾನುವಾರ ನಡೆದ ಪಾದಯಾತ್ರೆಯಲ್ಲಿ ನೂರಾರು ಜನರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
- ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಸಂಯೋಜಕಿ ರಾಜಶ್ರೀ ಚೌಧರಿ ಕಳವಳ
- 3ನೇ ಹಂತದ ಜಲ ಜಾಗೃತಿ-ಜನ ಜಾಗೃತಿ ಪಾದಯಾತ್ರೆಯ ಬಹಿರಂಗ ಸಭೆ
ಕಾರಟಗಿ: ತುಂಗಾ ಪಾನವೆಂದು ಹೆಗ್ಗಳಿಕೆಯಿಂದ ಗುರುತಿಸಿಕೊಂಡಿದ್ದ ತುಂಗಭದ್ರಾ ನದಿ ನೀರಿನಿಂದ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗುವ ದುಸ್ಥಿತಿ ಎದುರಾಗಿದ್ದು, ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದ ದಿನಗಳು ಮತ್ತಷ್ಟು ಆತಂಕಕಾರಿಯಾಗಲಿವೆ ಎಂದು ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಸಂಯೋಜಕಿ ರಾಜಶ್ರೀ ಚೌಧರಿ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಹಾಗೂ ಸ್ಥಳೀಯ ಜಾಗೃತ ಯುವಕ ಸಂಘ ಸೇರಿದಂತೆ ನಾನಾ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ನಡೆದ 3ನೇ ಹಂತದ ಜಲ ಜಾಗೃತಿ-ಜನ ಜಾಗೃತಿ ಪಾದಯಾತ್ರೆಯ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.
ತುಂಗಭದ್ರಾ ನದಿ ನೀರಿನ ಸಿಹಿಗುಣದಿಂದಾಗಿ ತುಂಗಾ ಪಾನವೆಂಬ ಮಾತು ರಾಷ್ಟ್ರದಲ್ಲೇ ಖ್ಯಾತಿಯಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ನದಿ ಕಲುಷಿತವಾಗಿದ್ದು, ನೀರು ಕುಡಿದರೆ ಹೃದಯಾಘಾತ, ರಕ್ತ ಹೆಪ್ಪುಗಟ್ಟುವಿಕೆ, ಕಿಡ್ನಿ ಸಮಸ್ಯೆ ಸೇರಿದಂತೆ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗುವ ಭೀತಿಯಿದೆ. ಅಲ್ಲದೇ, ಭವಿಷ್ಯದ ಪೀಳಿಗೆಗೆ ಮಾನಸಿಕ ಅಸ್ವಸ್ಥತೆಗೆ ತುತ್ತಾಗುವ ಅಪಾಯಕಾರಿ ದಿನಗಳು ಎದುರಾಗಲಿವೆ. ಕಾರ್ಖಾನೆಗಳ ತ್ಯಾಜ್ಯನೀರಿನ ವಿಚಾರದಲ್ಲಿ ನದಿ ಸಂರಕ್ಷಣೆ ಹಾಗೂ ವಾಯುಮಂಡಲ ರಕ್ಷಣೆಗೆ ಸರ್ಕಾರಗಳ ಬಳಿ ನೀತಿಗಳೇ ಇಲ್ಲದಂತಾಗಿವೆ ಎಂದರು.
ಮಾಜಿ ಶಾಸಕ ಬಸವರಾಜ ದಢೇಸೂಗೂರು ಮಾತನಾಡಿ, ನದಿ ನೀರು ರಕ್ಷಣೆಗೆ ಬೇಧ-ಭಾವಗಳಿಲ್ಲದೆ ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಮುಂದಾದಾಗ ಜೀವಸಂಕುಲ ಉಳಿವು ಸಾಧ್ಯವಿದೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಜೀವ ಸಂಕುಲ ನಾಶವಾಗುವುದಲ್ಲದೆ, ಮನುಷ್ಯ ಸಮಾಜವೂ ಅವನತಿಯ ಹಾದಿ ಹಿಡಿಯಲಿದೆ. ಹೀಗಾಗಿ ನದಿಗಳ ರಕ್ಷಣೆಗೆ ಅಭಿಯಾನ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಲಾಗುತ್ತಿದ್ದು, ಸಾಮುದಾಯಿಕ ಸಹಭಾಗಿತ್ವದ ಪ್ರಯತ್ನಗಳನ್ನು ಚಲನಶೀಲಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಮಾಜಿ ಶಾಸಕ, ನಿರ್ಮಲ ತುಂಗಭದ್ರಾ ಅಭಿಯಾನದ ಪ್ರಧಾನ ಸಂಚಾಲಕ ಮಹಿಮಾ ಪಟೀಲ್, ಪ್ರಚಾರ ರಾಯಭಾರಿ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯುಲು, ಪ್ರಮುಖರಾದ ಗಿರಿರಾಜ್ ಗುಪ್ತಾ, ಜಾಗೃತ ಯುವಕ ಸಂಘದ ಗೌರವಾಧ್ಯಕ್ಷ ಶರಣಪ್ಪ ಕೋಟ್ಯಾಳ ಮಾತನಾಡಿದರು.
ನಂತರ ವೇದಿಕೆಯಿಂದ ಮುಂದುವರಿದ ಪಾದಯಾತ್ರೆಗೆ ಮುಖಂಡ ನಾಗರಾಜ ತಂಗಡಗಿ ಚಾಲನೆ ನೀಡಿದರು.
ಆಂದೋಲನದ ಸಿ.ಪಿ.ಮಾಧವನ್, ಲೋಕೇಶ್ವರಪ್ಪ, ಪ್ರಮುಖರಾದ ಮರುಳಸಿದ್ದಯ್ಯಸ್ವಾಮಿ ಹಿರೇಮಠ, ವೀರಭದ್ರ ಶರಣರು ತಲೇಖಾನ್ ಮಠ, ಡಾ.ಶಿವಕುಮಾರ್ ಮಾಲಿಪಾಟೀಲ್, ಬಸವರಾಜ ಶೆಟ್ಟರ್, ಪ್ರಭು ಉಪನಾಳ, ಚನ್ನಬಸಪ್ಪ ಸುಂಕದ, ಪ್ರಹ್ಲಾದ್ ಜೋಷಿ ಮತ್ತಿತರರಿದ್ದರು.