ಸಿದ್ದಾಪುರ ಹಳ್ಳದಲ್ಲಿ ತ್ಯಾಜ್ಯ ಸುರಿದಿರುವುದು. 
ಕೊಪ್ಪಳ

ಜಲ ಮೂಲಗಳ ರಕ್ಷಣೆ ಸ್ಥಳೀಯ ಆಡಳಿತದ ಹೊಣೆ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಜಾಗೃತರಾಗಲಿ ಜನರು
  • ಹಳ್ಳ-ಕೊಳ್ಳಗಳಿಗೆ ತ್ಯಾಜ್ಯ ಸುರಿಯುವುದು ನಿಲ್ಲಲಿ
ಸಿದ್ದಾಪುರ: ಹಳ್ಳಕ್ಕೆ ತ್ಯಾಜ್ಯ ಸುರಿಯುವುದರಿಂದ ಜಲ ಮೂಲಕ್ಕೆ ಧಕ್ಕೆಯಾಗುತ್ತಿದ್ದು, ಸ್ಥಳೀಯ ಆಡಳಿತ ತನ್ನ ಜವಾಬ್ದಾರಿ ಮೆರೆಯಬೇಕಿದೆ.
ಪಂಚಾಯತ್ ರಾಜ್ ನಿಯಮಗಳ ಪ್ರಕಾರ ಗ್ರಾಮೀಣ ಭಾಗದಲ್ಲಿರುವ ಹಳ್ಳಗಳು, ಕೆರೆಗಳು, ನಾಲೆಗಳು ಮತ್ತು ರಾಜ ಕಾಲುವೆಗಳಂತಹ ನೈಸರ್ಗಿಕ ಜಲಮೂಲಗಳ ಸಂರಕ್ಷಣೆ ಮತ್ತು ನಿರ್ವಹಣೆ ಗ್ರಾಮ ಪಂಚಾಯಿತಿಯ ಹೊಣೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಿದ್ದಾಪುರ ಹಳ್ಳಕ್ಕೆ ಸಾರ್ವಜನಿಕರು ತ್ಯಾಜ್ಯ ಸೇರಿ ಅನುಪಯುಕ್ತ ವಸ್ತುಗಳನ್ನು ಎಸೆಯುತ್ತಿದ್ದರಿಂದ ಹಳ್ಳದ ಸೌಂದರ್ಯ ಹಾಳಾಗುವ ಜತೆಗೆ ದುರ್ನಾತ ಬೀರುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಹಳ್ಳಕ್ಕೆ ಸಮರ್ಪಕ ನೀರು ಬರುತ್ತಿಲ್ಲ. ತಗ್ಗು ಪ್ರದೇಶಗಳಲ್ಲಿ ಮಾತ್ರ ಜಲ ಸಂಗ್ರಹಣೆಯಾಗಿದೆ. ಎಲ್ಲೆಂದರಲ್ಲಿ ಕಸ ಸುರಿದಿರುವುದರಿಂದ ಸಿದ್ದಾಪುರ ಹಳ್ಳ ತ್ಯಾಜ್ಯ ಸಂಗ್ರಹ ಘಟಕವಾಗಿ ಮಾರ್ಪಡುತ್ತಿದೆ.
ಗ್ರಾಮದ ಪ್ರಮುಖ ಜಾತ್ರೆ, ಉತ್ಸವಗಳು ಸೇರಿ ಅನೇಕ ಕಾರ್ಯಕ್ರಮಗಳನ್ನು ಆಚರಿಸಲು ಗಂಗೆಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಕೆ ಮಾಡಿ ಬರುವುದು ವಾಡಿಕೆ. ಆದರೆ, ಈಗಿರುವ ಪರಿಸ್ಥಿತಿಯಲ್ಲಿ ಹಳ್ಳಕ್ಕೆ ತೆರಳಲು ಜನರು ಮುಜುಗರ ಅನುಭವಿಸಬೇಕಾಗಿದೆ. ಹಳ್ಳದಲ್ಲಿ ಗಂಗಾಪೂಜೆಗಾಗಿ ಕಟ್ಟೆ ನಿರ್ಮಾಣ ಮಾಡಲಾಗಿದೆ. ಅದರ ಸುತ್ತಲೂ ತ್ಯಾಜ್ಯ ಎಸೆದಿರುವುದರಿಂದ ದುರ್ನಾತ ಬೀರುತ್ತಿದ್ದು, ಸಾರ್ವಜನಿಕರು ಆ ಕಡೆ ತೆರಳಲು ಸಾಧ್ಯವಾಗದ ಸ್ಥಿತಿಯಿದೆ.
ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಕೇವಲ ಸರ್ಕಾರ ಅಥವಾ ಸ್ಥಳೀಯ ಆಡಳಿತದ ಕೆಲಸವಲ್ಲ. ಇದರಲ್ಲಿ ಜನರ ಜವಾಬ್ದಾರಿಯೂ ಹೆಚ್ಚಿದೆ. ಹಳ್ಳಗಳಿಗೆ ತ್ಯಾಜ್ಯ ನೀರು ಹಡಿಬಿಡುವುದು, ಪ್ಲಾಸ್ಟಿಕ್ ಅಥವಾ ರಾಸಾಯನಿಕ ವಸ್ತುಗಳನ್ನು ಎಸೆಯಬಾರದು. ಜಲಮೂಲಗಳನ್ನು ಕಲುಷಿತಗೊಳಿಸದಂತೆ ನೋಡಿಕೊಳ್ಳುವುದು ಗ್ರಾಮದ ನಾಗರಿಕರ ಸಾಮಾಜಿಕ ಕರ್ತವ್ಯವಾಗಿದೆ. ಇದರ ಜತೆಗೆ ಸಂಬಂಧಪಟ್ಟ ಅಧಿಕಾರಿ ವರ್ಗ ಈ ಬಗ್ಗೆ ಗಮನ ಹರಿಸಿ ಹಳ್ಳ ಸ್ವಚ್ಛತೆ ಜತೆಗೆ ಜಲ ಮೂಲಗಳ ರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.
"

ಗ್ರಾಮದ ಪ್ರತಿ ವಾರ್ಡ್‌ಗಳಿಗೆ ತೆರಳಿ ವಾಹನದ ಮೂಲಕ ಕಸ ಸಂಗ್ರಹಿಸಿ ಊರಿನ ಹೊರ ವಲಯದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಆದರೂ, ಕೆಲ ಸಾರ್ವಜನಿಕರು ಹಳ್ಳದಲ್ಲಿ ತ್ಯಾಜ್ಯ ಸುರಿಯುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು. ನರೇಗಾ ಯೋಜನೆಯಡಿ ಹಳ್ಳದ ಹೊಳೆತ್ತಲು ಕ್ರಮವಹಿಸಲಾಗುವುದು. ಈ ವಿಚಾರದಲ್ಲಿ ಗ್ರಾಪಂಗೆ ಜನರ ಸಹಕಾರ ಮುಖ್ಯವಾಗಿದೆ.

— ಜ್ಯೋತಿ ರೆಡ್ಡಿ ಪಿಡಿಒ, ಸಿದ್ದಾಪುರ