ಗಂಗಾವತಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕಚೇರಿ. 
ಕೊಪ್ಪಳ

ಗಂಗಾವತಿಯ 30 ಮಂದಿಗೆ ಆಜ್ಞಾಪ್ರತಿ ಜಾರಿ

ವೀರಾಪುರ ಕೃಷ್ಣ
ಗಂಗಾವತಿ: ನಗರದ ಪ್ರತಿಷ್ಟಿತ ಟಿಎಪಿಸಿಎಂಎಸ್‌ನಲ್ಲಾಗಿರುವ ಹಗರಣದ ವಿಚಾರಣೆ ಪ್ರಕ್ರಿಯೆ ಶುರುವಾಗಿದ್ದು, ಸತ್ತವರು ಸೇರಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗೆ ವಿಚಾರಣೆ ಆಜ್ಞಾಪ್ರತಿ (ಸಮನ್ಸ್) ಜಾರಿಗೊಳಿಸಲಾಗಿದೆ.
60ವರ್ಷಗಳ ಇತಿಹಾಸವಿರುವ ಮತ್ತು ಬಹುಕೋಟಿ ರೂ. ಆಸ್ತಿ ಹೊಂದಿರುವ ಗಂಗಾವತಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ದಲ್ಲಿನ ಹಣಕಾಸು ಮತ್ತು ಕಾರ್ಯನಿರ್ವಹಣೆ ಅಧಿಕಾರ ದುರ್ಬಳಕೆ ಹಿನ್ನೆಲೆಯಲ್ಲಿ 2024ರಲ್ಲಿ ದೂರು ದಾಖಲಾಗಿದ್ದು, ವಿಚಾರಣಾಧಿಕಾರಿಯನ್ನು ನೇಮಿಸಲಾಗಿತ್ತು. 2006ರಿಂದ 2024ರವರೆಗಿನ ಎಲ್ಲ ಕಡತ ಮತ್ತು ದಾಖಲೆಗಗಳನ್ನು ಪರಿಶೀಲಿಸಲಾಗಿದ್ದು, ಬರೋಬ್ಬರಿ ವರ್ಷದ ನಂತರ ವಿಚಾರಣೆಗಾಗಿ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿಗೆ ಅ.24ರಂದು ವಿಚಾರಣೆ ಸಮನ್ಸ್ ಜಾರಿಗೊಳಿಸಲಾಗಿದೆ.
ಟಿಎಪಿಸಿಎಂಎಸ್‌ಗೆ ಸೇರಿದ ಬಸ್ ನಿಲ್ದಾಣ ಬಳಿಯ ವಾಣಿಜ್ಯ ಮಳಿಗೆಗಳು.


ನ.10 ರಂದು ಖುದ್ದಾಗಿ ಹಾಜರಾಗಿ ಲಿಖಿತ ಹೇಳಿಕೆ ನೀಡುವಂತೆ ಸಮನ್ಸ್‌ನಲ್ಲಿ ತಿಳಿಸಲಾಗಿದೆ. ಮೇಲ್ನೋಟಕ್ಕೆ ಹಣಕಾಸು ಮತ್ತು ಅಧಿಕಾರ ದುರ್ಬಳಕೆ ಖಾತರಿಯಾಗಿದ್ದು, ವಿಚಾರಣೆ ನಂತರ ದೋಷಾರೋಪ ಪಟ್ಟಿ
ಸಲ್ಲಿಸುವ ಸಾಧ್ಯತೆಗಳಿವೆ.

ಆತಳಿತ ವೈಫಲ್ಯ

ವಿಚಾರಣೆಗಾಗಿ 30 ಜನರಿಗೆ ಸಮನ್ಸ್ ಜಾರಿಯಾಗಿದ್ದು, ಅದರಲ್ಲಿ ಈಗಾಗಲೇ ನಾಲ್ವರು ಮೃತಪಟ್ಟಿದ್ದಾರೆ. 2006ರಿಂದ 2024ವರೆಗೆ ಕಾರ್ಯನಿರ್ವಹಿಸಿದ 22 ಮಾಜಿ ಆಡಳಿತ ಮಂಡಳಿ ಸದಸ್ಯರು, ಹಾಲಿ ಮತ್ತು ನಿವೃತ್ತಿ ಸಿಬ್ಬಂದಿಗೂ ಸಮನ್ಸ್ ತಲುಪಿದೆ. ನಿರ್ಲಕ್ಷ್ಯದಿಂದ ಆಡಳಿತ ನಿರ್ವಹಿಸಿರುವುದು ಕಂಡು ಬಂದಿದ್ದು, ಹಣಕಾಸು ದುರ್ಬಳಕೆ ಸಾಬೀತಾದರೆ, ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ಒಟ್ಟು ಮೊತ್ತ ದೊಂದಿಗೆ ಶೇ.18 ಬಡ್ಡಿಯೊಂದಿಗೆ ಪಾವತಿಸಬೇಕಾಗುತ್ತಿದ್ದು, ದಾಖಲೆಗಳೇ ಮಾಯವಾಗಿವೆ ಎನ್ನಲಾಗಿದೆ. ಆಡಳಿತ ವೈಲ್ಯದಿಂದ ದೊಡ್ಡ ಪ್ರಮಾಣದ ನಷ್ಟವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಎಲ್ಲೆಲ್ಲಿ ಅವ್ಯವಹಾರ?

ರಸಗೊಬ್ಬರ, ಕ್ರಿಮಿನಾಶಕ ಮಾರಾಟ ದಾಸ್ತಾನಿನಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಅವಧಿ ಮೀರಿದ ಗೊಬ್ಬರ ಮತ್ತು ಕ್ರಿಮಿನಾಶಕಗಳ ವಿಲೇವಾರಿಲ್ಲೂ ದಾಖಲೆಗಳಿಲ್ಲ. ಬಸ್ ನಿಲ್ದಾಣ ಬಳಿಯ 13 ಮಹಿಳೆ ಮತ್ತು ಖಾಲಿ ಜಾಗದ ಬಾಡಿಗೆ ವಸೂಲಿಯಲ್ಲೂ ಲೋಪವಾಗಿದೆ. ಟಿಎಪಿಸಿಎಂಎಸ್ ಆವರಣದಲ್ಲಿರುವ ಅಕ್ಕಿ ಗಿರಣಿ ಬಾಡಿಗೆ ವಸೂಲಿ ಹಣವೂ ಸಂಘಕ್ಕೆ ಪಾವತಿಯಾಗಿಲ್ಲ. ಸಂಘಕ್ಕೆ ಸೇರಬೇಕಾದ ಕೆಇಬಿ, ಹಿಂದೂಸ್ತಾನ ಸ್ಟೀಲ್ ಕಂಪನಿ, ಪಡಿತರ ವಿತರಣೆ, ಎ್ಸಿಐ, ಸಿಬ್ಬಂದಿ ಗ್ರಾಚ್ಯುಟಿ, ಭವಿಷ್ಯನಿಧಿ, ವತ್ತಿ ಮಾಲು ಸಾಲ, ಖಾಲಿ ಚೀಲ, ಲಾರಿ ಸಾಗಣೆ ವೆಚ್ಚ ಸೇರಿ 58 ವಿಭಾಗಳಿಂದ ಬರಬೇಕಾದ ಹಣ ಸಂಘಕ್ಕೆ ಸೇರಿಲ್ಲ, ದಾಖಲೆಗಳಿಲ್ಲ. ಲೆಕ್ಕಪತ್ರ ನಿರ್ವಹಣೆಯಲ್ಲೂ ಲೋಪವಾಗಿದ್ದು, ಒಂದಕ್ಕೊಂದು ತಾಳೆಯಾಗುತ್ತಿಲ್ಲ. ವಿಚಾರಣಾಧಿಕಾರಿಗಳಿಗೆ ಸಕಾಲಕ್ಕೆ ಸಿಬ್ಬಂದಿ ದಾಖಲೆ ನೀಡದಿದ್ದರಿಂದ ಕರ್ತವ್ಯ ಲೋಪ ಕಂಡು ಬಂದಿದೆ.

ವಿಚಾರಣಾಧಿಕಾರಿ ವರ್ಗಾವಣೆ

ಆಡಳಿತ ಮಂಡಳಿಯಿಂದ ಸಿಬ್ಬಂದಿವರೆಗೆ ಕರ್ತವ್ಯಲೋಪವಾಗಿರುವುದು ಕಂಡು ಬಂದಿದ್ದು, ತಲೆದಂಡದಿಂದ ತಪ್ಪಿಸಿಕೊಳ್ಳಲು ಕೆಲವರು ಕಾನೂನಿನ ಮೊರೆ ಹೋಗಲೆತ್ನಿಸಿದರೆ, ಇನ್ನೂ ಕೆಲವರು ಪ್ರಭಾವಿಗಳ ಮೂಲಕ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸಮನ್ಸ್ ಜಾರಿಗೊಳಿಸಿದ್ದ ವಿಚಾರಣಾಧಿಕಾರಿ ಪ್ರಕಾಶ ಸಜ್ಜನರ್ ವರ್ಗಾವಣೆಗೊಂಡಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಈ ಸ್ಥಾನಕ್ಕೆ ಸಹಕಾರ ಇಲಾಖೆಯ ಮಲ್ಲಯ್ಯರನ್ನು ನಿಯೋಜಿಸಲಾಗಿದೆ. ಆಡಳಿತ ಮಂಡಳಿಯಲ್ಲಿದ್ದ ಪ್ರಭಾವಿಗಳಿಗೂ ಸಮನ್ಸ್ ಜಾರಿಯಾಗಿರುವುದು ರಾಜಕೀಯ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ತಪ್ಪಿಸ್ಥರ ವಿರುದ್ಧ ಚಾರ್ಜ್‌ಶೀಟ್ ಕಾಯಂ ಆಗಲಿದೆ ಎಂದು ವಕೀಲರೊಬ್ಬರು ದೃಢೀಕರಿಸಿದ್ದಾರೆ.
"

ಟಿಎಪಿಸಿಎಂಎಸ್‌ನಲ್ಲಾಗಿರುವ ಅವ್ಯವಹಾರ ಮತ್ತು ಅಧಿಕಾರ ದುರ್ಬಳಕೆ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ಸಮನ್ಸ್ ಜಾರಿಗೊಳಿಸಿದ್ದು, ವಿಚಾರಣೆಗೆ ಕಡ್ಡಾಯ ಹಾಜರಾಗಬೇಕಿದೆ. ನಂತರ ದೋಷಾಪರೋಪ ಪಟ್ಟಿ ಸಿದ್ಧವಾಗಲಿದೆ.

— ಅನಿಲ್ ಬಬಲಾದಿ ಸಿಇಒ, ಟಿಎಪಿಸಿಎಂಎಸ್, ಗಂಗಾವತಿ