ಕೊಪ್ಪಳದ ಸಾಹಿತ್ಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅರೆಕಾಲಿಕ ಕಾನೂನು ಸ್ವಯಂಸೇವಕರ ತರಬೇತಿ ಕಾರ್ಯಗಾರವನ್ನು ಜಿಲ್ಲಾ ಪ್ರಧಾನ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಸಿ. ಅವರು ಉದ್ಘಾಟಿಸಿದರು. ನ್ಯಾಯಾಧೀಶರಾದ ಕುಮಾರ ಡಿ.ಕೆ., ಸರಸ್ವತಿ ದೇವಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ ಇತರರಿದ್ದರು.
- ನ್ಯಾಯಾಧೀಶ ಚಂದ್ರಶೇಖರ ಸಿ. ಸೂಚನೆ
- ತರಬೇತಿ ಕಾರ್ಯಾಗಾರ
ಕೊಪ್ಪಳ: ಜಿಲ್ಲೆಯ ಜನರಲ್ಲಿ ಕಾನೂನು ಅರಿವು ಮೂಡಿಸುವ ಮೂಲಕ ಅವರನ್ನು ಕಾನೂನು ಸಾಕ್ಷರರನ್ನಾಗಿ ಮಾಡುವ ಜವಾಬ್ದಾರಿ ಅರೆಕಾಲಿಕ ಕಾನೂನು ಸ್ವಯಂಸೇವಕರ ಮೇಲಿದೆ ಅವರು ಜನ ಮತ್ತು ನ್ಯಾಯಾಲದ ನಡುವೆ ಸೇತುವೆಯಂತೆ ಕಾರ್ಯ ಮಾಡಬೇಕು ಎಂದು ಜಿಲ್ಲಾ ಪ್ರಧಾನ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಸಿ. ಅವರು ಕರೆ ನೀಡಿದರು.
ನಗರದ ಸಾಹಿತ್ಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅರೆಕಾಲಿಕ ಕಾನೂನು ಸ್ವಯಂಸೇವಕರ ಮೂರು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ನ್ಯಾಯಾಧೀಶರು ನೇರವಾಗಿ ಜನರ ಮನೆಬಾಗಿಲಿಗೆ ಹೋಗಲು ಸಾಧ್ಯವಿಲ್ಲ. ಈ ಕೊರತೆಯನ್ನು ನೀಗಿಸಲು ಸ್ವಯಂಸೇವಕರು ಕಾನೂನು ಸೇವಾ ಪ್ರಾಧಿಕಾರದ ಉಚಿತ ಸವಲತ್ತುಗಳನ್ನು ಜನರಿಗೆ ತಲುಪಿಸಬೇಕು. ನ್ಯಾಯಾಲಯಗಳಲ್ಲಿ ಲಕ್ಷಾಂತರ ಪ್ರಕರಣಗಳು ಬಾಕಿ ಇವೆ. ಕಕ್ಷಿದಾರರು ಅಹಂ ಬಿಟ್ಟು ಲೋಕ ಅದಾಲತ್ ಮೂಲಕ ರಾಜಿ ಸಂಧಾನ ಮಾಡಿಕೊಳ್ಳಲು ಮುಂದಾಗಬೇಕು ಎಂದರು.
ನ್ಯಾಯಾಧೀಶರಾದ ಕುಮಾರ ಡಿ.ಕೆ., ಸರಸ್ವತಿ ದೇವಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ, ಹಿರಿಯ ವಕೀಲ ವಿ.ಎಂ. ಭೂಸನೂರಮಠ, ಕಾರ್ಯದರ್ಶಿ ಪ್ರಕಾಶ ಹಾದಿಮನಿ ಹಾಗೂ ಪ್ರದಿಪ ಉಂಕಿ, ವೆಂಕಟೇಶ ಇತರರಿದ್ದರು.