ಗಂಗಾವತಿ ನಗರಸಭೆ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಬಿಎಲ್‌ಒಗಳಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರದಲ್ಲಿ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಶ್ಯಾಮಸುಂದರ್ ಕಾಂಬ್ಳೆ ಮಾತನಾಡಿದರು. ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಸೋಮಶೇಖಗೌಡ, ಕುಮಾರ ಸ್ವಾಮಿ ಇತರರಿದ್ದರು.
- ಮತದಾರರ ನೋಂದಣಾಧಿಕಾರಿ ಶ್ಯಾಮಸುಂದರ್ ಕಾಂಬ್ಳೆ ಹೇಳಿಕೆ
- ತರಬೇತಿ ಕಾರ್ಯಗಾರ
ಗಂಗಾವತಿ: ಅರ್ಹ ಮತದಾರರು ಮತಪಟ್ಟಿಯಿಂದ ಬಿಟ್ಟು ಹೋಗದಂತೆ ಬಿಎಲ್‌ಒಗಳು ಎಚ್ಚರಿಕೆ ವಹಿಸಬೇಕು. ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು ಎಂದು ಗಂಗಾವತಿ ವಿಧಾನಸಭೆ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಶ್ಯಾಮಸುಂದರ್ ಕಾಂಬ್ಳೆ ಹೇಳಿದರು.
ನಗರದ ನಗರಸಭೆ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಬಿಎಲ್‌ಒಗಳಿಗಾಗಿ ಬುಧವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು. ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಬಿಎಲ್‌ಒಗಳು ಕಾರ್ಯ ನಿರ್ವಹಿಸಬೇಕು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಜೂ.30ರಿಂದ ಆರಂಭವಾಗಲಿದ್ದು, ಅಗತ್ಯ ಮಾಹಿತಿ ಪಡೆದು ಪ್ರಕ್ರಿಯೆ ಯಶಸ್ವಿಗೊಳಿಸಬೇಕು. ಅರ್ಹ ಮತದಾರರು ಪಟ್ಟಿಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಮನೆ ಮನೆ ಭೇಟಿ ನೀಡಿ ಮತದಾರರ ಸಹಿಯೊಂದಿಗೆ ಮಾಹಿತಿ ಅಪ್ಲೋಡ್ ಮಾಡಬೇಕು ಎಂದರು.
ಸಹಾಯಕ ನೋಂದಣಾಧಿಕಾರಿ ಹಾಗೂ ತಹಸೀಲ್ದಾರ್ ಯು.ವಸಂತಕುಮಾರ ಮಾತನಾಡಿ, ಎಚ್ಚರಿಕೆಯಿಂದ ಮತಪಟ್ಟಿ ಪರಿಷ್ಕರಣೆ ಕಾರ್ಯನಿರ್ವಹಿಸಬೇಕಿದ್ದು, ದೂರುಗಳು ಬಾರದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಸೋಮಶೇಖಗೌಡ, ಕುಮಾರ ಸ್ವಾಮಿ, ಕಂದಾಯ ನಿರೀಕ್ಷಕರು ಮತ್ತು ಗ್ರಾಮಾಡಳಿತಾಧಿಕಾರಿ ಇದ್ದರು.