ಬಸ್ ಕೊಪ್ಪಳ ಕೇಂದ್ರಿಯ ಬಸ್ ನಿಲ್ದಾಣ ಪ್ರವೇಶಿಸಿವಾಗ ರಸ್ತೆ ಬ್ಲಾಕ್ ಆಗಿರುವುದು.
- ಕೊನೆಗಾಣಬೇಕು ಫುಟ್ ಪಾತ್ ಒತ್ತುವರಿ
- ಬಸ್ ನಿಲ್ದಾಣದ ಮುಂದೆ ಹೆಚ್ಚಿದ ಸಮಸ್ಯೆ
ಕೊಪ್ಪಳ : ನಗರದ ಹೃದಯ ಭಾಗ ಕೇಂದ್ರ ಬಸ್ ನಿಲ್ದಾಣ ಬಳಿ ಬ್ಯಾರಿಕೇಡ್ ಅಳವಡಿಕೆಯಿಂದ ಸಂಚಾರ ದಟ್ಟಣೆ ನಿಯಂತ್ರವಾಗಿದೆ. ಆದರೆ, ಪಾರ್ಕಿಂಗ್ ನಿಯಮ ಉಲ್ಲಂಘನೆ, ಫುಟ್ ಪಾತ್ ಒತ್ತುವರಿ ಕಾರಣ ಏಕಮುಖ ರಸ್ತೆಗಳು ಇಕ್ಕಟ್ಟಾಗಿದ್ದು ಬಸ್ ಸೇರಿ ಬೃಹತ್ ವಾಹನ ಯೂ ರ್ಟನ್ ತೆಗೆದುಕೊಳ್ಳಲು ಪರದಾಡುವಂತಾಗಿದೆ.
ಸ್ಥಳಿಯರರು, ವಾಹನ ಸವಾರರ ಪ್ರಕಾರ, ಬ್ಯಾರಿಕೇಡ್ ಅಳವಡಿಸುವ ಮೊದಲು ಮೂಲ ಸಮಸ್ಯೆಗಳನ್ನು ಪರಿಹರಿಸಬೇಕಾಗಿತ್ತು. ಬಸ್ ನಿಲ್ದಾಣದ ಮುಂಭಾಗದ ಫುಟ್ಪಾತ್ಗಳು ಎರಡೂ ಬದಿ ಸಂಪೂರ್ಣ ಅತಿಕ್ರಮಣಕ್ಕೆ ಒಳಗಾಗಿದ್ದು, ಅರ್ಧ ರಸ್ತೆಯಲ್ಲೇ ಕಾರು ಹಾಗೂ ಬೈಕ್ಗಳನ್ನು ಪಾರ್ಕ್ ಮಾಡಲಾಗುತ್ತಿದೆ. ಕೆಲ ವ್ಯಾಪಾರಿಗಳು ರಸ್ತೆಯಲ್ಲೇ ವ್ಯಾಪಾರ ನಡೆಸುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ವಾಹನಗಳ ಸುಗಮ ಓಡಾಟಕ್ಕೆ ಲಭ್ಯವಿರುವ ಜಾಗ ಮತ್ತಷ್ಟು ಕುಗ್ಗುತ್ತಿದೆ. ಈ ಸಮಸ್ಯೆಗಳನ್ನು ಬಗೆಹರಿಸದೆ ಬ್ಯಾರಿಕೇಡ್ ಅಳವಡಿಸಿರುವುದರಿಂದ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಸುಗಮ ಸಂಚಾರಕ್ಕಾಗಿ ಬ್ಯಾರಿಕೇಡ್ ಹಾಕಿರುವುದು ಒಳ್ಳೆಯ ಉದ್ದೇಶ. ಆದರೆ ಬಸ್ಗಳು, ಆಟೋಗಳು ಮತ್ತು ಇತರೆ ವಾಹನಗಳಿಗೆ ಸಾಕಫಿ್ಟು ಜಾಗವೇ ಇಲ್ಲದಿದ್ದಾಗ ಬ್ಯಾರಿಕೇಡ್ನಿಂದ ಸಮಸ್ಯೆ ಕಡಿಮೆಯಾಗುವುದಕ್ಕಿಂತ ಹೆಚ್ಚಾಗಿದೆ ಎಂದು ಹಲವು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನಗರದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಕೇಂದ್ರಿಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವಿದೆ. ಮೊದಲು ಫುಟ್ಪಾತ್ ಅತಿಕ್ರಮಣ ತೆರವು, ಅಕ್ರಮ ಪಾರ್ಕಿಂಗ್ ನಿಯಂತ್ರಣ, ಆಟೋ ಸ್ಟಾಂಡ್ ಮರು ವ್ಯವಸ್ಥೆ ಹಾಗೂ ಬಸ್ ಸಂಚಾರಕ್ಕೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸುವಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.
ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬದಲು ತಾತ್ಕಾಲಿಕ ಬ್ಯಾರಿಕೇಡ್ ಅಳವಡಿಕೆಗೆ ಆದ್ಯತೆ ನೀಡಲಾಗಿದೆ ಎಂಬ ಟೀಕೆಗಳೂ ವ್ಯಕ್ತವಾಗಿವೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಬಸ್ ನಿಲ್ದಾಣದ ಮುಂಭಾಗದ ಸಂಚಾರ ವ್ಯವಸ್ಥೆಯನ್ನು ಮರುಪರಿಶೀಲಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಪರಿಷ್ಕರಣೆ ಮಾಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ನಿಲ್ದಾಣ ಪ್ರವೇಶಿಸಲು ಬಸ್ ಗಳ ವದ್ದಾಟ
ಹೊಸಪೇಟೆ ಹಾಗೂ ದದೇಗಲ್ ರಸ್ತೆ ಮಾರ್ಗದಿಂದ ಬರುವ ಬಸ್ಗಳು ಬಸ್ ನಿಲ್ದಾಣದೊಳಗೆ ಪ್ರವೇಶಿಸಲು ಸಾಕಷ್ಟು ತೊಂದರೆ ಅನುಭವಿಸುತ್ತಿವೆ. ಬ್ಯಾರಿಕೇಡ್ ಅಳವಡಿಕೆಯಿಂದ ರಸ್ತೆ ಅಗಲ ಕಡಿಮೆಯಾಗಿರುವ ಕಾರಣ ಬಸ್ಗಳು ನಿಧಾನವಾಗಿ ತಿರುವು ಪಡೆದು ಒಳಗೆ ಹೋಗಬೇಕಾಗುತ್ತಿದೆ. ಒಂದು ಬಸ್ ನಿಲ್ದಾಣದೊಳಗೆ ಪ್ರವೇಶಿಸುವವರೆಗೆ ಅದರ ಹಿಂದಿನ ವಾಹನಗಳು ಕಾಯಬೇಕಾಗುತ್ತಿದ್ದು, ಪರಿಣಾಮವಾಗಿ ಉದ್ದನೆಯ ವಾಹನಗಳ ಸಾಲು ನಿಮಾರ್ಣವಾಗುತ್ತಿದೆ.
ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿರುವುದು ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಆಟೋ ಸ್ಟಾಂಡ್. ಆಟೋಗಳು ನಿರಂತರವಾಗಿ ಸ್ಟಾಂಡ್ಗೆ ಪ್ರವೇಶಿಸುವ ಮತ್ತು ಹೊರಬರುವ ಕಾರಣ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಆಟೋಗಳು ತಿರುವು ಪಡೆಯುವವರೆಗೆ ಹಿಂದಿನ ವಾಹನಗಳು ನಿಲ್ಲಬೇಕಾದ ಪರಿಸ್ಥಿತಿ ಉಂಟಾಗುತ್ತಿದ್ದು, ಪೀಕ್ ಅವಧಿಯಲ್ಲಿ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯ ದೃಶ್ಯವಾಗಿದೆ.
ಬಸ್ ಮುಂಭಾಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು, ಅದನ್ನು ಸುಧಾರಿಸಲು ಕೆಜಿಪಿ ಮುಂಭಾಗದಿಂದ ಲೇಬರ್ ವೃತ್ತದವರೆಗೆ ಬ್ಯಾರಿಕೆಡ್ ಹಾಕಲಾಗಿದೆ. ಇದರಿಂದ ಸ್ವಲ್ಪಮಟ್ಟಿಗೆ ಸಂಚಾರ ದಟ್ಟಣೆ ಸುಧಾರಿಸಿದೆ.
— ಡಾ. ರಾಮ್ ಎಲ್. ಅರಸಿದ್ದಿ, ಎಸ್ಪಿ ಕೊಪ್ಪಳ.
ಬಸ್ ನಿಲ್ದಾಣದ ಮುಂದೆ ಬ್ಯಾರಿಕೇಡ್ ಅಳವಡಿಸಿದ ಬಳಿಕ ಸಂಚಾರ ನಿಯಂತ್ರಣವಾಗಲಿದೆ ಎಂದು ನಿರೀಕ್ಷಿಸಿದ್ದೆವು. ಆದರೆ ಫುಟ್ಪಾತ್ ಒತ್ತುವರಿ, ಅಕ್ರಮ ಪಾರ್ಕಿಂಗ್ ನಿಂದಾಗಿ ಆಟೋ ಸ್ಟಾಂಡ್ಗೆ ಹೊಗಲು ಸಮಸ್ಯೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಮೂಲ ಸಮಸ್ಯೆಗಳನ್ನು ಪರಿಹರಿಸಿ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು.
— ಗಣೇಶ ಆಟೋ ಚಾಲಕ ಕೊಪ್ಪಳ.
ಕೇಂದ್ರ ಬಸ್ ನಿಲ್ದಾಣ ನಗರದ ಪ್ರಮುಖ ಭಾಗವಾಗಿದ್ದು ಪ್ರತಿದಿನ ಸಾವಿರಾರು ಜನರು ಇಲ್ಲಿ ಓಡಾಡುತ್ತಾರೆ. ಫುಟ್ಪಾತ್ಗಳು ಸಂಪೂರ್ಣ ಅತಿಕ್ರಮಣಕ್ಕೆ ಒಳಗಾಗಿರುವುದರಿಂದ ಪಾದಚಾರಿಗಳು ರಸ್ತೆಯಲ್ಲೇ ನಡೆಯಬೇಕಾಗಿದೆ. ಬ್ಯಾರಿಕೇಡ್ ಹಾಕುವುದು ಮಾತ್ರ ಪರಿಹಾರವಲ್ಲ. ಫುಟ್ಪಾತ್ ತೆರವು, ಪಾರ್ಕಿಂಗ್ ನಿಯಂತ್ರಣ, ಆಟೋ ಸ್ಟಾಂಡ್ ಮರು ವ್ಯವಸ್ಥೆ ಹಾಗೂ ಬಸ್ಗಳಿಗೆ ಪ್ರತ್ಯೇಕ ಪ್ರವೇಶ ವ್ಯವಸ್ಥೆ ಮಾಡಿದರೆ ಮಾತ್ರ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.
— ಸಯ್ಯದ್ ಆಸಿಫ್ ಸ್ಥಳಿಯ, ಕೊಪ್ಪಳ.