ಯಲಬುರ್ಗಾ ರೈತ ಸಂಪರ್ಕ ಕೇಂದ್ರದಲ್ಲಿ ಮಾರಾಟವಾಗದೆ ಉಳಿದಿರುವ ಬಿತ್ತನೆ ಬೀಜಗಳ ದಾಸ್ತಾನು. 
ಕೊಪ್ಪಳ

‘ವರುಣನ ಅವಕೃಪೆ’ ಖರೀದಿಯಾಗದ ಬಿತ್ತನೆ ಬೀಜಗಳು

ಪ್ರಮುಖ ಮುಖ್ಯಾಂಶಗಳು

  • ಹಿಂಪಡೆಯಲು ರೈತರ ಕೋರಿಕೆ
  • ವಿಶೇಷ ಬರ ಪರಿಹಾರ ಪ್ಯಾಕೇಜ್ ಘೋಷಿಸಲು ಮನವಿ
ಯಲಬುರ್ಗಾ: ತಾಲೂಕಿನಲ್ಲಿ ಮುಂಗಾರು ವಿಳಂಬ ಹಾಗೂ ಮಳೆಯ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ಸಂಪೂರ್ಣ ಕುಂಠಿತಗೊಂಡಿದ್ದು, ಬಿತ್ತನೆ ಬೀಜಗಳು ಮಾರಾಟವಾಗದೆ ಕೃಷಿ ಇಲಾಖೆ ಗೋದಾಮಿನಲ್ಲೇ ಉಳಿಯುವಂತಾಗಿದೆ.
ಪ್ರತಿ ವರ್ಷ ಈ ಸಮಯದಲ್ಲಿ ಬಿತ್ತನೆ ಬೀಜಕ್ಕೆ ಪರದಾಡುತ್ತಿದ್ದ ರೈತರು ಈ ಬಾರಿ ವರುಣನ ಅವಕೃಪೆಯಿಂದ ಬಿತ್ತನೆ ಕೃಷಿಚುವಟಿಕೆಯಿಂದ ದೂರ ಉಳಿದಿದ್ದಾರೆ. ಹೀಗಾಗಿ ರೈತ ಸಂಪರ್ಕ ಕೇಂದ್ರಗಳ ಗೋದಾಮಿನಲ್ಲಿ ಉದ್ದು, ಹೆಸರು, ತೊಗರಿ, ಸೋಯಾಬಿನ್, ಗೋವಿನ ಜೋಳ, ಸೂರ್ಯಕಾಂತಿ ಸೇರಿ ವಿವಿಧ ಬಿತ್ತನೆ ಬೀಜಗಳು ಉಳಿದುಕೊಂಡಿವೆ.
ಮಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಕೆಲ ರೈತರು ಮೊದಲೇ ಬೀಜ ಖರೀದಿಸಿದ್ದರು. ಇದೀಗ ಮಳೆ ಕೈಕೊಟ್ಟ ಬಿತ್ತನೆ ಬೀಜಗಳನ್ನು ಮರಳಿ ಪಡೆಯುವಂತೆ ಕೃಷಿ ಕೇಂದ್ರದ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಮಳೆಯಾದರೆ ಮರಳಿ ಬಿತ್ತನೆ ಮಾಡಲು ಬಯಸುವ ರೈತರಿಗೆ ಸರ್ಕಾರದಿಂದ ಮತ್ತೆ ಬೀಜ-ಗೊಬ್ಬರ ಸಿಗುವುದು ಕಷ್ಟಸಾಧ್ಯವಾಗಿದೆ. ಸರ್ಕಾರ ವಿಶೇಷ ಬರ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಒಂದು ವೇಳೆ ಮಳೆಯಾದರೆ ಮರುಬಿತ್ತನೆಗೆ ಉಚಿತ ಬೀಜ ಹಾಗೂ ಗೊಬ್ಬರ ಒದಗಿಸಬೇಕು ಎಂದು ರೈತರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.
"

ಬಿತ್ತನೆ ಬೀಜಕ್ಕೆ ಕೊರತೆ ಇಲ್ಲ. ಕಳೆದ 2-3 ದಿನಗಳಲ್ಲಿ ವಾತಾವರಣದಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆ ಇದ್ದು, ಬಿತ್ತನೆ ಬೀಜಗಳು ಮಾರಾಟವಾಗಬಹುದು. ಬೆಳೆ ಒಣಗಿದ ರೈತರಿಗೆ ಮರು ಬಿತ್ತನೆಗೆ ಬೀಜ ವಿತರಿಸಲು ಅವಕಾಶವಿಲ್ಲ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.

— ಪ್ರಮೋದ್ ತುಂಬಳ ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ಯಲಬುರ್ಗಾ