- ಹೆಚ್ಚುವರಿ ಪರಿಹಾರಕ್ಕೆ ಮೊರೆ
- 30 ಪ್ರಕರಣಗಳಲ್ಲಿ ವಿತರಣೆ ಬಾಕಿ
ವಿಜಯವಾಣಿ ವಿಶೇಷ ಕೊಪ್ಪಳ : ವರ್ಷದಿಂದ ವರ್ಷಕ್ಕೆ ಬಿಸಿಲ ಧಗೆ ಹೆಚ್ಚುತ್ತಿದೆ. ಜನ-ಜಾನುವಾರು ದಾಹ ತೀರಿಸುವಿಕೆ ಹಾಗೂ ಅಂತರ್ಜಲಮಟ್ಟ ಹೆಚ್ಚಳ ಉದ್ದೇಶದಿಂದ ನಿರ್ಮಿಸುತ್ತಿರುವ ಕೆರೆಗಳು ಸಕಾಲದಲ್ಲಿ ಮೂರ್ತರೂಪ ಪಡೆಯುತ್ತಿಲ್ಲ. ಹೆಚ್ಚುವರಿ ಪರಿಹಾರ ಬೇಡಿಕೆ, ಮೇಲ್ಮನವಿ, ಸಕಾಲದಲ್ಲಿ ಪರಿಹಾರ ಮೊತ್ತ ಪಾವತಿ ವಿಳಂಬ ಮುಂದುವರೆದಿದ್ದು ಮೂಲ ಉದ್ದೇಶ ಈಡೇರದಂತಾಗುತ್ತಿದೆ.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲಾದ್ಯಂತ 206 ಕೆರೆಗಳಿವೆ. ಹೊಸದಾಗಿ ಜಿನುಗು ಕೆರೆ ನಿರ್ಮಾಣಕ್ಕೆ ಭೂಸ್ವಾಧಿನ ಪ್ರಕ್ರಿಯೆಗಳು ಮುಂದುವರೆದಿವೆ. ಆದರೆ, ಮೊದಲಿನಂತೆ ರೈತರು ಭೂಮಿ ನೀಡಲು ಮುಂದಾಗುತ್ತಿಲ್ಲ. ಸರ್ಕಾರ ನೀಡುವ ಪರಿಹಾರ ಮೊತ್ತಕ್ಕಿಂತ ಮುಕ್ತ ಮಾರುಕಟ್ಟೆಯಲ್ಲಿ ಭೂಮಿಗೆ ಉತ್ತಮ ಬೆಲೆ ಇದೆ. ಜಮೀನು ಕಳೆದುಕೊಂಡರೆ ಪರ್ಯಾಯ ಭೂಮಿ ಸಿಗುವುದಿಲ್ಲವೆಂಬ ಕಾರಣಕ್ಕೆ ಅನ್ನದಾತರು ಹಿಂದೇಟು ಹಾಕುತ್ತಿದ್ದಾರೆ.
ಕಳೆದ 10 ವರ್ಷದಲ್ಲಿ ಜಿಲ್ಲೆಯಲ್ಲಿ 196 ಪ್ರಕರಣಗಳಲ್ಲಿ ಹೆಚ್ಚುವರಿ ಪರಿಹಾರ ಧನ ಪಾವತಿಗೆ ವಿವಿಧ ನ್ಯಾಯಾಲಯಗಳು ಸೂಚಿಸಿವೆ. ಅವುಗಳಲ್ಲಿ 166 ಪ್ರಕರಣಗಳಲ್ಲಿ ಪರಿಹಾರ ಮೊತ್ತ ಪಾವತಿಸಿರುವ ಸರ್ಕಾರ ಪ್ರಕರಣ ಪರಿಹರಿಸಿಕೊಂಡಿದೆ. ಇನ್ನೂ 30 ಪ್ರಕರಣಗಳು ಬಾಕಿ ಇವೆ. ಯಲಬುರ್ಗಾ ತಾಲೂಕಿನಲ್ಲಿ 11, ಕನಕಗಿರಿ 2, ಕುಷ್ಟಗಿ 9, ಕೊಪ್ಪಳ 5, ಗಂಗಾವತಿ 3 ಪ್ರಕರಣಗಳಲ್ಲಿ ಪರಿಹಾರ ನೀಡಬೇಕಿದೆ.
ಎರಡರಲ್ಲಿ ಕೋರ್ಟ್ ಜಪ್ತಿ ವಾರಂಟ್ ನೀಡಿದೆ. ಪರಿಹಾರವಾಗಿ ಒಂದು ಪ್ರಕರಣದಲ್ಲಿ 32.42 ಲಕ್ಷ ರೂ. ಮೊತ್ತ ಪಾವತಿಸಿ ದಂಡಾಸ್ತ್ರದಿಂದ ಸರ್ಕಾರ ಪಾರಾಗಿದೆ. ಇನ್ನೊಂದು ಪ್ರಕರಣದಲ್ಲಿ ಬಂಧನ ವಾರಂಟ್ ನೀಡಿದ್ದು, ಹೈ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಪೂರಕವಾಗಿ ನ್ಯಾಯಾಲಯಕ್ಕೆ 20.78 ಲಕ್ಷ ರೂ. ಠೇವಣಿ ಇಟ್ಟಿದ್ದು ಬಂಧನದಿಂದ ಪಾರಾಗಿದೆ.
8ರಲ್ಲಿ ಮೇಲ್ಮನವಿ
ಕಳೆದೊಂದು ದಶಕದಲ್ಲಿ ಹೆಚ್ಚುವರಿ ಪರಿಹಾರ ಮೊತ್ತಕ್ಕೆ ಸೂಚಿಸಿದ್ದ 8 ಪ್ರಕರಣಗಳಲ್ಲಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಜೀರಾಳ್ ಜಿನುಗು ಕೆರೆ, ಹೊಮ್ಮಿನಾಳ, ನೆಲಜೇರಿ, ಚಿಕ್ಕ ಮ್ಯಾಗೇರಿ, ಗುನ್ನಾಳ, ಜಬ್ಬಲಗುಡ್ಡ, ತಳುವಗೇರಾ, ಗಬ್ಬೂರು ಜಿನುಗು ಕೆರೆಗಳ ಭೂಸ್ವಾಧಿನ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.
30 ಪ್ರಕರಣ ಬಾಕಿ
ಇನ್ನು 30 ಪ್ರಕರಣಗಳಲ್ಲಿ ಹೆಚ್ಚುವರಿ ಪರಿಹಾರ ಧನ ಪಾವತಿ ಬಾಕಿ ಉಳಿದಿದೆ. ಕುಷ್ಟಗಿ ತಾಲೂಕಿನ ಹೊಮ್ಮಿನಾಳ, ತಳುವಗೇರಾ, ನೀರಲೂಟಿ, ಶಿಡ್ಲಬಾವಿ, ವಿಠಲಾಪುರ, ಪುರ, ಕೊರಡಕೇರಾ, ಗಂಗಾವತಿ ತಾಲೂಕಿನ ಮಲ್ಲಾಪುರ, ಗಡ್ಡಿ, ಮಲಕನಮರಡಿ, ಕೊಪ್ಪಳ ತಾಲೂಕಿನ ಗಬ್ಬೂರು, ಜಬ್ಬಲಗುಡ್ಡ, ಯತ್ನಟ್ಟಿ, ಯಲಬುರ್ಗಾ ತಾಲೂಕಿನ ನೆಲಜೇರಿ, ಚಿಕ್ಕಮ್ಯಾಗೇರಿ, ಗುನ್ನಾಳ, ಬೇವೂರು, ರಾಜೂರು, ತಳಕಲ್, ಕನಕಗಿರಿ ತಾಲೂಕಿನ ಗೋಡಿನಾಳ, ಜೀರಾಳ ಕೆರೆಗಳಿಗೆ ನಡೆದ ಭೂಸ್ವಾಧಿನ ಪ್ರಕರಣಗಳಲ್ಲಿ ಪರಿಹಾರಧನ ಪಾವತಿ ಬಾಕಿ ಉಳಿದಿದೆ.
ಅಂತರ್ಜಲಕ್ಕೆ ಪೂರಕ
ವರ್ಷದಿಂದ ವರ್ಷಕ್ಕೆ ತಾಪಮಾನ ಏರುಗತಿಯಲ್ಲಿದೆ. ನಿಯಂತ್ರಣಕ್ಕೆ ಹರಸಾಹಸ ಪಡುವಂತಾಗುತ್ತಿದೆ. ಜನ&ಜಾನುವಾರು ಬಿಸಿಲ ಧಗೆಗೆ ಹೈರಾಣಾಗುತ್ತಿದ್ದಾರೆ. ಕೆರೆ ತುಂಬಿಸುವ ಯೋಜನೆಗಳು ಕೆಲವು ಪೂರ್ಣಗೊಂಡಿದ್ದು ಕೆರೆಯಲ್ಲಿ ನೀರು ಸಂಗ್ರಹ ಇರುವುದರಿಂದ ಬೇಸಿಗೆ ಎದುರಿಸುವಿಕೆ ಸುಲಭವಾಗುತ್ತಿದೆ. ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಕೆರೆಗಳ ಸ್ವಾಧಿನ ಪ್ರಕ್ರಿಯೆ ಸಕಾಲದಲ್ಲಿ ಮುಗಿಯಬೇಕಿದೆ. ಇದರಿಂದ ಕೆರೆ ಮೂರ್ತರೂಪ ಪಡೆಯಲಿದ್ದು ನಿರ್ವಹಣೆಗೂ ದಾರಿಯಾಗಲಿದೆ. ನೀರು ಸಂಗ್ರಹ ಹೆಚ್ಚಿದಲ್ಲಿ ಜೀವ ಜಲದ ಬವಣೆ ತಗ್ಗಲಿದೆ. ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ.
ಕೆರೆಗಳಿಗೆ ಭೂ ಸ್ವಾಧಿನ ಪ್ರಕ್ರಿಯೆ ನಿಗದಿತ ಅವಧಿಯಲ್ಲಿಯೇ ಮುಗಿಸಲಾಗುತ್ತಿದೆ. ಪರಿಹಾರ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಬಹುತೇಕ ಪ್ರಕರಣಗ ಪರಿಗಹರಿಸಲಾಗಿದೆ. ಸಹಾಯಕ ಆಯುಕ್ತರ ಕಚೇರಿಯಿಂದ ಬಾಕಿ ಪ್ರಕರಣಗಳ ಮಾಹಿತಿ ಪಡೆದು ಪರಿಹಾರಕ್ಕೆ ಯತ್ನಿಸಲಾಗುವುದು.
— ಡಾ.ಸುರೇಶ ಬಿ.ಇಟ್ನಾಳ. ಕೊಪ್ಪಳ ಜಿಲ್ಲಾಧಿಕಾರಿ.