ಕನಕಗಿರಿ ಕನಕಾಚಲ ದೇವಸ್ಥಾನದ ಆಡಳಿತಾಧಿಕಾರಿಯೂ ಆದ ಎಡಿಸಿ ಸಿದ್ರಾಮೇಶ್ವರ ಪೊಲೀಸರಿಗೆ ಬರೆದ ಪತ್ರ.
ಕನಕಗಿರಿ: ಶ್ರೀ ಕನಕಾಚಲ ದೇವಸ್ಥಾನದ ಬಳಿ ತೆಂಗಿನಕಾಯಿ ಮಾರಾಟ ಹಾಗೂ ಸಂತೆ ಭೂ ಬಾಡಿಗೆ ಸಂಗ್ರಹದ ಅವಧಿ ಮುಗಿದಿದ್ದು, ದೇವಸ್ಥಾನ ಹಾಗೂ ಹರಾಜುದಾರರ ನಡುವೆ ಬಾಕಿ ಮೊತ್ತ ಪಾವತಿಯ ಪ್ರಹಸನ ಬೆಳಕಿಗೆ ಬಂದಿದೆ.
2025ರ ಏ.19ರಂದು ದೇವಸ್ಥಾನದಲ್ಲಿ ಸಂತೆ ಭೂ ಬಾಡಿಗೆ ಸಂಗ್ರಹಿಸಲು ಹಾಗೂ ತೆಂಗಿನಕಾಯಿ ಮಾರಾಟಕ್ಕೆ 2026ರ ಮಾ.23ರವರೆಗೆ ಅವಧಿ ನಿಗದಿಪಡಿಸಲಾಗಿತ್ತು. 2025-26ನೇ ಸಾಲಿನ ಸಗಟು ಹರಾಜು ಪ್ರಕ್ರಿಯೆಯಾಗಿ ಜೋಡಿ ಕಾಯಿಗೆ 60ರೂ.ಗೆ ಮಾರಾಟ ಮಾಡಲು ಒಟ್ಟು 29 ಲಕ್ಷ ರೂ.ಹಾಗೂ ಚಾಪೆ ಅಳತೆಗೆ 25ರೂ.ನಂತೆ 7.05 ಲಕ್ಷ ರೂ.ಗೆ ಸಂತೆ ಭೂ ಬಾಡಿಗೆ ನಿಗದಿಯಾಗಿತ್ತು.
ಕಳೆದ ಮಾ.23ಕ್ಕೆ ಹರಾಜು ಅವಧಿ ಮುಗಿದಿದೆ. ಆದರೆ, ತೆಂಗಿನಕಾಯಿ ಹರಾಜುದಾರರು ಪಾವತಿಸಬೇಕಾದ 29ಲಕ್ಷ ರೂ.ಪೈಕಿ 21.5ಲಕ್ಷ ರೂ. ಪಾವತಿಸಿದ್ದು, ಬಾಕಿ ಹಣ ಪಾವತಿಸಿಲ್ಲ. ಇದರಿಂದ ಧಾರ್ಮಿಕ ದತ್ತಿ ಇಲಾಖೆಯ ಕಾನೂನು ಅನ್ವಯ ಹರಾಜು ಪಡೆದ ಇಬ್ಬರಿಂದಲೂ ಬಾಕಿ ಹಣ ಪಾವತಿಸಲು ಕ್ರಮವಹಿಸಲು ದೇವಸ್ಥಾನ ಆಡಳಿತಾಧಿಕಾರಿಯೂ ಆದ ಎಡಿಸಿ ಸಿದ್ರಾಮೇಶ್ವರ ಮಾ.24ಕ್ಕೆ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ಆದರೆ, ಇದರಲ್ಲಿ ಮಧ್ಯವರ್ತಿಗಳು ತಮ್ಮ ಕೈಚಳಕ ತೋರಿಸಲು ಮುಂದಾಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅಲ್ಲದೇ, ಈ ವಿಚಾರ ಸಚಿವರ ಅಂಗಳಕ್ಕೂ ಹೋಗಿದೆ. ಕಾಯಿ ಹರಾಜುದಾರರಿಂದ ಸಂಪೂರ್ಣ ಹಣ ಪಾವತಿಸಿಕೊಂಡಲ್ಲಿ ಭೂ ಬಾಡಿಗೆಯ ಸಂಪೂರ್ಣ ಹಣವನ್ನು ನೀಡುತ್ತೇನೆ ಎನ್ನುತ್ತಾರೆ ಸಂತೆ ಹರಾಜುದಾರರು.
ಹರಾಜು ನಡೆಯುವಾಗ ಈ ಹಿಂದೆ ಬಸ್‌ನಿಲ್ದಾಣದ ತಿರುವಿನವರೆಗೆ ಇದ್ದ ತೆಂಗಿನ ಕಾಯಿ ಮಾರಾಟ ಹಾಗೂ ಭೂ ಬಾಡಿಗೆ ಸಂಗ್ರಹದ ಜಾಗವನ್ನು ವಾಲ್ಮೀಕಿ ವೃತ್ತದವರೆಗೆ ವಿಸ್ತರಿಸಲಾಯಿತು. ಇದ್ದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದರಿಂದ 2025ರ ಏ.21ರಂದು ಪತ್ರಿಕೆಯಲ್ಲಿ ಹರಾಜು ಜಾಗ ವಿಸ್ತರಣೆ ಅವೈಜ್ಞಾನಿಕ ಎಂದು ಸುದ್ದಿ ಪ್ರಕಟಗೊಂಡಿತ್ತು. ಆದರೂ ಸಂಬಂಧಿಸಿದವರು ಕ್ರಮವಹಿಸಿರಲಿಲ್ಲ.
ಹರಾಜುದಾರರು ಮಾತ್ರ ಬಾಡಿಗೆ ಸಂಗ್ರಹಿಸಿದ್ದರು. ಆದರೆ, ಹಲವು ತಿಂಗಳ ಬಳಿಕ ತೆಂಗಿನಕಾಯಿ ಖರೀದಿಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ನೆಪ ತೆಂಗಿನಕಾಯಿ ಹರಾಜುದಾರರು ಹಾಗೂ ದೇವಸ್ಥಾನದ ನಡುವಿನ ತಿಕ್ಕಾಟಕ್ಕೆ ಕಾರಣವಾಯಿತು.
ಹಣ ಕಡಿಮೆಗೊಳಿಸಲು ವಾದ: ವಾಲ್ಮೀಕಿ ವೃತ್ತದವರೆಗೆ ಕಾಯಿಗಳನ್ನು ಮಾರಾಟ ಮಾಡಲು ಅವಕಾಶ ನೀಡಿದ್ದರಿಂದ 29ಲಕ್ಷ ರೂ.ಗೆ ಹರಾಜಾಗಿತ್ತು. ಆದರೆ, ಅಲ್ಲಿವರೆಗಿನ ವ್ಯಾಪಾರಿಗಳು ನಮ್ಮ ಬಳಿ ಕಾಯಿ ಖರೀದಿಸಿಲ್ಲವಾದ್ದರಿಂದ ಹರಾಜು ಕಡಿಮೆಗೊಳಿಸುವಂತೆ ಇಲ್ಲವೇ ಸಮಸ್ಯೆ ಬಗೆಹರಿಸುವಂತೆ ವಾದ ಮಂಡಿಸಿದ್ದರು. ಆದರೆ, ಅದ್ಯಾವುದು ಇತ್ಯರ್ಥಗೊಂಡಿರಲಿಲ್ಲ.
ಹೆಚ್ಚಿನ ದರಕ್ಕೆ ಕಾಯಿ ಮಾರಾಟ
ಹರಾಜು ಮೊತ್ತ ಕಡಿಮೆಗೊಳಿಸಿ ಎನ್ನುತ್ತಲೇ ತೆಂಗಿನಕಾಯಿ ಹರಾಜು ಪಡೆದವರು ನಿಯಮ ಮೀರಿ 80-100ರೂ.ಗೆ ಜೋಡಿ ಕಾಯಿ ಮಾರಾಟ ಮಾಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಈ ಕುರಿತು ಸಂಘಟನೆಗಳು ದಾಖಲೆ ಸಹಿತ ದೂರು ಸಲಿಸಿದ್ದರೂ ಕ್ರಮವಾಗಿರಲಿಲ್ಲ. ಜಾತ್ರೆಯಲ್ಲಿಯೂ ಲಕ್ಷಾಂತರ ಕಾಯಿಗಳನ್ನು ಅದೇ 80-100ರೂ. ದರಕ್ಕೆ ಮಾರಿದರೂ ಕ್ರಮವಹಿಸದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹರಿಹಾಯ್ದು ಜಿಲ್ಲಾಡಳಿತದ ಬಾಗಿಲು ತಟ್ಟಿದ್ದಾರೆ. ಈ ವಿಚಾರವನ್ನು ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎನ್ನುವ ಆರೋಪ ಸಾರ್ವಜನಿಕರು ಮಾಡುತ್ತಿದ್ದಾರೆ.
ಇಬ್ಬರೂ ಹರಾಜುದಾರರಿಂದ ಬಾಕಿ ಹಣ ಪಾವತಿಸಲು ಕ್ರಮ ವಹಿಸುವಂತೆ ಮೇಲಧಿಕಾರಿಗಳು ಪೊಲೀಸರಿಗೆ ಪತ್ರ ಬರೆದಿದ್ದಾರೆ. ಯಾವುದೇ ರೀತಿಯಲ್ಲಿ ಮುಚ್ಚಿ ಹಾಕಲು ಅವಕಾಶವಿಲ್ಲ.