ಕೊಪ್ಪಳ ನೌಕರರ ಸಾಂಸತಿಕ ಭವನದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ ಮಾತನಾಡಿದರು. ಗೌರವಾಧ್ಯಕ್ಷ ಸಿದ್ಧಪ್ಪ ಮೆಳ್ಳಿ, ಉಪಾಧ್ಯಕ್ಷ ಗೋಪಾಲಕೃಷ್ಣ ಮುಂಡರಗಿ, ರಾಜ್ಯ ಪದಾಧಿಕಾರಿಗಳಾದ ಮಂಜುನಾಥ, ಹೇಮಣ್ಣ ಕವಲೂರ, ಖಜಾಂಚಿ ಜಯತೀರ್ಥ ದೇಸಾಯಿ ಇದ್ದರು.
ಕೊಪ್ಪಳ : ಸರ್ಕಾರಿ ನೌಕರರ ಸಮಸ್ಯೆಗಳ ಪರಿಹಾರ ಮತ್ತು ಹಕ್ಕುಗಳ ರಕ್ಷಣೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸದಾ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ ಹೇಳಿದರು.
ನಗರದ ನೌಕರರ ಸಾಂಸತಿಕ ಭವನದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಜುಲೈ 11ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಹಾಗೂ ಮುಖ್ಯಮಂತ್ರಿ ಅಭಿನಂದನಾ ಸಮಾರಂಭದಲ್ಲಿ ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಇದೇ ತಿಂಗಳ 26ರಂದು ಕೊಪ್ಪಳದಲ್ಲಿ ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ಯಲಬುರ್ಗಾ ತಾಲೂಕಿನ ಕ್ಯಾನ್ಸರ್ ಪೀಡಿತ ಸರ್ಕಾರಿ ನೌಕರರಿಗೆ ಸುಮಾರು 2 ಲಕ್ಷ ರೂ. ವೈದ್ಯಕಿಯ ನೆರವು ದೊರಕುವಂತೆ ಸಂಘ ಶ್ರಮಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಇನ್ನಷ್ಟು ಆಸ್ಪತ್ರೆಗಳನ್ನು ಈ ಯೋಜನೆಗೆ ಸೇರ್ಪಡೆಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಯಲಬುರ್ಗಾ ತಾಲೂಕು ಅಧ್ಯಕ್ಷ ಶಿದ್ದಲಿಂಗಪ್ಪ ಶ್ಯಾಗೋಟಿ ಮಾತನಾಡಿ, ಸರ್ಕಾರಿ ನೌಕರರ ಮೇಲೆ ರಜಾದಿನಗಳಲ್ಲೂ ಕೆಲಸದ ಒತ್ತಡ ಹೇರಲಾಗುತ್ತಿರುವ ಬಗ್ಗೆ ಸಂಘ ಧ್ವನಿಯಾಗಬೇಕು. ಜತೆಗೆ 371(ಜೆ) ಮೀಸಲಾತಿ ಹಾಗೂ ಮುಂಬಡ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರ್ಕಾರ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಗೌರವಾಧ್ಯಕ್ಷ ಸಿದ್ಧಪ್ಪ ಮೆಳ್ಳಿ, ಉಪಾಧ್ಯಕ್ಷ ಗೋಪಾಲಕೃಷ್ಣ ಮುಂಡರಗಿ, ರಾಜ್ಯ ಪದಾಧಿಕಾರಿಗಳಾದ ಮಂಜುನಾಥ, ಹೇಮಣ್ಣ ಕವಲೂರ, ಖಜಾಂಚಿ ಜಯತೀರ್ಥ ದೇಸಾಯಿ, ಪದಾಧಿಕಾರಿಗಳಾದ ಸರ್ದಾರ ಅಲಿ, ಹನುಮಂತಪ್ಪ ನಾಯಕ, ಶಂಶಾದ ಬೇಗಂ, ಶಿವಶಂಕರ ಕಲ್ಮಠ, ಭಾರತಿ ಹವಳೆ, ನಾಗರಾಜ ನಾಯಕ ಡೊಳ್ಳಿನ, ಶಿವಪ್ಪ ಜೋಗಿ, ಯಮನೂರಪ್ಪ ಕಟಗಿ ಇತರರಿದ್ದರು.