ಗಂಗಾವತಿ ಕಲ್ಮಠ ಶ್ರೀ ಚನ್ನಬಸವಸ್ವಾಮಿ ಮಹಿಳಾ ಕಾಲೇಜಿನಲ್ಲಿ ವಿಶ್ವಚೇತನ ವಿದ್ಯಾರ್ಥಿನಿ ಒಕ್ಕೂಟದಿಂದ ಏರ್ಪಡಿಸಿದ್ದ ಯುಗಾದಿ ವಸಂತೋತ್ಸವ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ ಮಾತನಾಡಿದರು. ಉಪಪ್ರಾಚಾರ್ಯ ಡಾ.ಕೆ.ಎಂ.ಬಸವರಾಜ, ಅಧ್ಯಾಪಕರಾದ ಪ್ರೊ. ಜಿ.ಬಸವರಾಜ, ಡಾ.ಶಾರದಾ ಪಾಟೀಲ್, ಡಾ.ವಾಣಿಶ್ರೀ ಪಾಟೀಲ್, ಪ್ರೊ.ರುದ್ರಗೌಡ ಇದ್ದರು. 
ಕೊಪ್ಪಳ

ಪಥ್ವಿಯ ಜನ್ಮದಿನ ಯುಗಾದಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಡಾ. ಶರಣಬಸಪ್ಪ ಕೋಲ್ಕಾರ ಹೇಳಿಕೆ
  • ಕಲ್ಮಠ ಕಾಲೇಜಿನಲ್ಲಿ ಯುಗಾದಿ ವಸಂತೋತ್ಸವ
ಗಂಗಾವತಿ: ಯುಗಾದಿಯು ಧಾರ್ಮಿಕ ಆಚರಣೆ ಮಾತ್ರವಲ್ಲ. ಭಾರತೀಯ ಪುರಾತನ ವಿಜ್ಞಾನಿಗಳಾದ ಋಷಿಮುನಿಗಳು ರಚಿಸಿರುವ ಬ್ರಹ್ಮಾಂಡ ಪುರಾಣದಲ್ಲಿ ಪೃಥ್ವಿಯ ಉಗಮದ ಬಗ್ಗೆ ಹೇಳಿದ್ದು, ಯುಗಾದಿಯು ಭೂಮಾತೆಯ ಜನ್ಮದಿನವಾಗಿದೆ ಎಂದು ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ ಹೇಳಿದರು.
ನಗರದ ಕಲ್ಮಠ ಶ್ರೀ ಚನ್ನಬಸವಸ್ವಾಮಿ ಮಹಿಳಾ ಕಾಲೇಜಿನಲ್ಲಿ ವಿಶ್ವಚೇತನ ವಿದ್ಯಾರ್ಥಿನಿ ಒಕ್ಕೂಟದಿಂದ ಶನಿವಾರ ಏರ್ಪಡಿಸಿದ್ದ ಯುಗಾದಿ ವಸಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯುಗಾದಿ ಪ್ರಕೃತಿಯ ಪರ್ವವಾಗಿರುವುದರಿಂದ ಅದು ಎಲ್ಲ ಧರ್ಮಿಯರ ಹಬ್ಬ. ಹೊಸ ಸಂವತ್ಸರದಂದು ಮುಂದಿನ ವರ್ಷದುದ್ದಕ್ಕೂ ಬರುವ ನೋವು-ನಲಿವುಗಳನ್ನು ಸಮಭಾವದಿಂದ ಸ್ವೀಕರಿಸಬೇಕೆಂಬ ಅರ್ಥದಲ್ಲಿ ಬೇವು-ಬೆಲ್ಲ ಸೇವನೆಯನ್ನು ರೂಢಿಗೊಳಿಸಲಾಗಿದೆ ಎಂದರು.
ಸಾಂಪ್ರದಾಯಿಕ ಉಡುಗೆ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ಮತ್ತು ಅಧ್ಯಾಪಕರು ಪ್ರಕೃತಿ ಪರ್ವವನ್ನು ಆಚರಿಸಿದರು. ಅಲಂಕೃತ, ಬಣ್ಣದ ಮಡಕೆಗಳ ಮೇಲೆ ಜ್ಞ್ಙಾನಕಳಸವನ್ನಿರಿಸಿ ಮೆರವಣಿಗೆಯ ಮೂಲಕ ತಂದು ಪ್ರತಿಷ್ಠಾಪಿಸಲಾಯಿತು. ಕಬ್ಬು, ಬಾಳೆ, ಮಾವಿನ ತೋರಣ, ಭತ್ತದ ತೆನೆ, ಬೇವು-ಬೆಲ್ಲ, ಅಕ್ಕಿಯನ್ನು ಮೆರವಣಗೆಗಳಲ್ಲಿ ತಂದು ಪ್ರಕೃತಿ ಮಾತೆಗೆ ಸಾಂಕೇತಿಕವಾಗಿ ಕೃತಜ್ಞತೆ ಸಲ್ಲಿಸಲಾಯಿತು. ವಿದ್ಯಾರ್ಥಿನಿಯರು ಬೇವು ಪಾನೀಯ ತಯಾರಿಸಿ ವಿತರಿಸಿದರು. ನಂತರ ಯುಗಾದಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಅಧ್ಯಾಪಕರು ಶುಭಕೋರಿದರು.
ಉಪಪ್ರಾಚಾರ್ಯ ಡಾ.ಕೆ.ಎಂ.ಬಸವರಾಜ, ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷೆ ಡಾ.ಜರೀನಾ, ಅಧ್ಯಾಪಕರಾದ ಪ್ರೊ.ಜಿ.ಬಸವರಾಜ, ಡಾ.ಶಾರದಾ ಪಾಟೀಲ್, ಡಾ.ವಾಣಿಶ್ರೀ ಪಾಟೀಲ್, ಪ್ರೊ.ರುದ್ರಗೌಡ, ಸಿಬ್ಬಂದಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಶ್ರೀದೇವಿ, ಶಫೀನಾ ಅಂಜುಮ್ ಇದ್ದರು.