ಗಂಗಾವತಿ ತಾಲೂಕಿನ ದಾಸನಾಳದ ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸಿರುವುದು.
- ಕಣ್ಮುಚ್ಚಿಕುಳಿತ ಅಧಿಕಾರಿಗಳು
- ಪಂಪ್‌ಸೆಟ್ ಮೂಲಕ ಕೃಷಿಗೆ ಬಳಕೆ
- ಎಡದಂಡೆ ಕಾಲುವೆ ಮೇಲ್ಭಾಗದ ಪ್ರಭಾವಿಗಳಿಂದ ಅಕ್ರಮ
ವಿಜಯವಾಣಿ ವಿಶೇಷ ಗಂಗಾವತಿ: ಕುಡಿಯುವ ಉದ್ದೇಶಕ್ಕಾಗಿ ತುಂಗಭದ್ರಾ ಎಡದಂಡೆ ಕಾಲುವೆಗಳಿಗೆ ಹರಿಸುತ್ತಿರುವ ನೀರಿಗೂ ಮೇಲ್ಭಾಗದ (ಬಲಭಾಗ) ಪ್ರಭಾವಿಗಳು ಕನ್ನ ಹಾಕುತ್ತಿದ್ದು, ಅಧಿಕಾರಿಗಳು ಎಚ್ಚೆತ್ತುಕೊಳ್ಳುವ ಮುನ್ನವೇ ಪೈಪ್‌ಲೈನ್ ಜೋಡಿಸಿಕೊಂಡಿದ್ದಾರೆ.
ಎಡದಂಡೆ ಕಾಲುವೆ ತುಂಗಭದ್ರಾ ಜಲಾಶಯದಿಂದ ಟೇಲ್ಯಾಂಡ್‌ವರೆಗೆ 226.91ಕಿ.ಮೀ. ಉದ್ದವಿದ್ದು, 87 ವಿತರಣೆ ಕಾಲುವೆಗಳಿವೆ. 7000 ಕ್ಯೂಸೆಕ್ ಸಾಮರ್ಥ್ಯದ ಕಾಲುವೆಗೆ ಸದ್ಯ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ 165 ಗ್ರಾಮಗಳಿಗೆ ಕುಡಿಯಲು ನೀರು ಹರಿಸಲಾಗುತ್ತಿದೆ. ಎಡದಂಡೆ ಮೇಲ್ಭಾಗದ ಕೆಲ ಪ್ರಭಾವಿಗಳು ಭಾರಿ ಪ್ರಮಾಣದ ಪಂಪ್‌ಸೆಟ್ ಮೂಲಕ ನೀರು ಪಡೆಯುತ್ತಿದ್ದು, ಸಣಾಪುರದಿಂದ ಕಾರಟಗಿವರೆಗಿನ ಬಹುತೇಕ ಕಡೆ ಅಕ್ರಮ ಪಂಪ್‌ಸೆಟ್‌ಗಳು ಕಂಡು ಬಂದಿವೆ. ಕಾಲುವೆ ಕೆಳಭಾಗದಲ್ಲಿ ುಟ್‌ಬಾಲ್‌ಗಳನ್ನು ಹಾಕಿದ್ದು ಕಂಡು ಬಂದಿದ್ದು, ಕೆಳಭಾಗದ ಕೆಲ ರೈತರು ಆಕ್ಷೇಪಿಸಿದರಲ್ಲದೇ ಜಲಸಂಪನ್ಮೂಲ ಇಲಾಖೆಗೆ ದೂರು ನೀಡಿದ್ದಾರೆ. ವಿಜಯನಗರ, ರಾಯಬಸವಣ್ಣ ಕಾಲುವೆಗಳಲ್ಲೂ ಪೈಪ್‌ಲೈನ್ ಹಾಕಿರುವುದು ಕಂಡು ಬಂದಿದೆ.
ದೂರು ಬಂದಾಗಷ್ಟೇ ದಾಳಿ
ಬಲಭಾಗದ ರೈತರು ಹೊಲಗಳಲ್ಲಿ ಕಾಲುವೆಗಳಿಂದ ನೀರು ಸಂಗ್ರಹಿಸುವುದಕ್ಕಾಗಿ ಕೃತಕ ಕೆರೆಗಳನ್ನು ನಿರ್ಮಿಸಿಕೊಂಡಿದ್ದು, ಕಾಲುವೆಗೆ ನೀರು ಹರಿಸುತ್ತಿದ್ದಂತೆ ಪಂಪ್‌ಸೆಟ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ದಾಸನಾಳದಿಂದ ಆರಾಳ್‌ವರೆಗಿನ ಕಾಲುವೆಗಳಲ್ಲಿ ಹೆಚ್ಚು ಪಂಪ್‌ಸೆಟ್‌ಗಳಿದ್ದು, ಬಂಡ್ರಾಳ್, ಉಡುಮಕಲ್‌ವರೆಗೂ ಕೆರೆಯಲ್ಲಿ ಸಂಗ್ರಹಿಸಿದ ನೀರನ್ನು ಹರಿಸಲಾಗುತ್ತಿದೆ. 10ರಿಂದ 25 ಎಚ್‌ಪಿ ಸಾಮರ್ಥ್ಯದ ಪಂಪ್‌ಸೆಟ್‌ಗಳಿದ್ದು, ಕಾಲುವೆ ಪಾದಚಾರಿ ರಸ್ತೆ ಕೆಳಭಾಗದಲ್ಲಿ ಪೈಪ್‌ಲೈನ್ ಹಾಕಲಾಗಿದೆ. ಟೇಲ್ಯಾಂಡ್ ನೀರು ತಲುಪದಿದ್ದಾಗ ಗಂಗಾವತಿ, ಸಿಂಧನೂರು, ಮಾನ್ವಿ ಭಾಗದ ರೈತರು ನೀರು ಕಳವಿನ ಬಗ್ಗೆ ಹಲವು ಬಾರಿ ಧ್ವನಿ ಎತ್ತುತ್ತಿದ್ದರೂ, ಅಧಿಕಾರಿಗಳು ಶಾಶ್ವತ ಕ್ರಮ ಕೈಗೊಂಡಿಲ್ಲ. ದೂರು ಬಂದಾಗ ದಾಳಿ ನಡೆಸಿ ಹರಕು-ಮುರಕು ಪೈಪ್ ಮತ್ತು ಕೆಟ್ಟಹೋದ ಪಂಪ್‌ಸೆಟ್‌ಗಳನ್ನು ಜಪ್ತಿ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ.
ಹೆಸರಿಗಷ್ಟೇ ಟಾಸ್‌ಕೆೆರ್ಸ್
ನೀರು ಕಳವು ತಡೆಗಟ್ಟಲು ತಾಲೂಕು ಮಟ್ಟದಲ್ಲಿ ಟಾಸ್ಕ್ ೆರ್ಸ್ ಸಮಿತಿಯಿದ್ದು, ಕಾಲುವೆ ಭಾಗದಲ್ಲಿ ಹಗಲು, ರಾತ್ರಿ ಕಾವಲು ಕಾಯಬೇಕೆಂಬ ನಿಯಮವಿದೆ. ಕಂದಾಯ, ಜಲಸಂಪನ್ಮೂಲ, ಪೊಲೀಸ್, ಗ್ರಾಪಂ, ಜೆಸ್ಕಾಂ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಜಲಸಂಪನ್ಮೂಲ ಅಧಿಕಾರಿಗಳಿಗೆ ಹೊರತುಪಡಿಸಿ ಉಳಿದ ಇಲಾಖೆ ಅಧಿಕಾರಿಗಳಿಗೆ ಕಾರ್ಯವ್ಯಾಪ್ತಿ ಗೊತ್ತಿಲ್ಲ. ಅಕ್ರಮ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡುವ ಜೆಸ್ಕಾಂ ಅಧಿಕಾರಿಗಳ ಜಾಣಮೌನ ಜಿಲ್ಲಾಡಳಿತಕ್ಕೂ ಗೊತ್ತಿದೆ. ನೀರು ಕಳವಿನ ಪರ, ವಿರೋಧದ ನಡುವೆ ಕೆಳಭಾಗದ ರೈತರು ಆತಂಕಕ್ಕೊಳಗಾಗಿದ್ದು, ನಿಯಂತ್ರಣ ಮಾತ್ರ ನಿಂತಿಲ್ಲ. ಕಾಲುವೆ ಮೇಲೆ ನಿಷೇಧಾಜ್ಞೆ ಹೊರಡಿಸುವ ಜಿಲ್ಲಾಡಳಿತ ಸಾಧಕ-ಬಾಧಕಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಎಡದಂಡೆ ಕಾಲುವೆ ಕೆಳಭಾಗದಲ್ಲಿ ನೀರು ಕಳವಿಗೆ ಪೈಪ್‌ಲೈನ್ ಹಾಕಿದ್ದು, ುಟ್‌ಬಾಲ್ ಕಾಣಿಸುತ್ತಿರುವುದು. ಬೆಳೆಗೂ ಇಲ್ಲ-ಕಾಲುವೆಗೂ ಹರಿಸಲ್ಲ...
ತುಂಗಭದ್ರಾ ಜಲಾಶಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗದಿದ್ದರಿಂದ ಜಲಾಶಯದ ಎಡ ಮತ್ತು ಬಲಭಾಗದ ಕಾಲುವೆಗೆ ನೀರು ಹರಿಸಲ್ಲ, ಕೃಷಿ ಭೂಮಿಗೆ ನೀರು ಸಿಗಲ್ಲ ಎಂದು ಪ್ರಾದೇಶಿಕ ಆಯುಕ್ತರೇ ಜು.18ರಂದು ಅಧಿಕೃತ ಆದೇಶ ಹೊರಡಿಸಿದ್ದಾರೆ. ನೀರಿಗಾಗಿ ಒಂದೆಡೆ ರೈತರು ಹೋರಾಟ ನಡೆಸುತ್ತಿದ್ದರೆ, ಕೆಲವೆಡೆ ಸದ್ದಿಲ್ಲದೇ ಕುಡಿವ ನೀರಿಗೂ ಕನ್ನ ಹಾಕುತ್ತಿದ್ದಾರೆ. ನೀರು ಕಳವು ಪ್ರಕರಣ ಕೆಲವರಿಗೆ ಗಂಭೀರವಾಗಿ ಕಾಣಿಸದಿದ್ದರೂ, ಕೆಲ ಗ್ರಾಮಗಳ ಕುಡಿವ ನೀರಿನ ಹಾಹಾಕಾರ ನೋಡಿ ಎಂದು ಗ್ರಾಮಸ್ಥರೇ ನೀರು ಕಳ್ಳರಿಗೆ ಸಾಮಾಜಿಕ ಜಾಲತಾಣದ ಮೂಲಕ ಸೂಚಿಸಿದ್ದಾರೆ.
ಅಭದ್ರತೆಯಲ್ಲಿ ಗ್ಯಾಂಗ್‌ಮನ್‌ಗಳು...
ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಕಾಲುವೆ ಮತ್ತು ನೀರಿನ ನಿಗಾವಹಿಸಲು ಗ್ಯಾಂಗ್‌ಮ್ಯಾನ್‌ಗಳನ್ನು ನಿಯೋಜಿಸಿದ್ದು, 226 ಕಿ.ಮೀ.ಉದ್ದದ ಕಾಲುವೆಗೆ ನೇಮಕಗೊಂಡಿದ್ದು 314 ಗ್ಯಾಂಗ್‌ಮನ್‌ಗಳು ಮಾತ್ರ. ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಡ್ರೆಸ್ ಕೋಡಿಲ್ಲ, ಭದ್ರತೆಗೆ ಯಾವುದೇ ಸಲಕರಣೆಗಳಿಲ್ಲ. ತಿಂಗಳಿಗೊಮ್ಮೆ ಗೌರವ ಧನವೂ ಬರಲ್ಲ. ಗುತ್ತಿಗೆ ಕಂಪನಿ ನೀಡಿದಾಗ ಮಾತ್ರ ಗೌರವ ಪಡೆಯಬೇಕಿದ್ದು, ಇತರ ಯಾವುದೇ ಭತ್ಯೆಗಳಿಲ್ಲ. ಅಭದ್ರತೆಯಲ್ಲಿರುವ ಗ್ಯಾಂಗ್‌ಮನ್‌ಗಳಿಗೆ ಕಾಲುವೆ ಭದ್ರತೆ ಜವಾಬ್ದಾರಿ. ಕಾಲುವೆಗೆ ನೀರು ಹರಿಸಿದಾಗ ಜೀವ ಭಯದಿಂದಲೇ ಕರ್ತವ್ಯ ನಿರ್ವಹಿಸುವ ಸ್ಥಿತಿಯಿದೆ.
ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಹರಿಸಿರುವ ಕುಡಿವ ನೀರನ್ನು ಕೆಲವರು ಕದಿಯುತ್ತಿದ್ದು, ಭಾರಿ ಪ್ರಮಾಣದ ಪಂಪ್‌ಸೆಟ್‌ಗಳನ್ನು ಹಾಕಿಕೊಂಡಿದ್ದರೂ ಅಧಿಕಾರಿಗಳು ಗಮನಿಸುತ್ತಿಲ್ಲ. ಈಗಾಗಲೇ ಜಿಲ್ಲಾಡಳಿತಕ್ಕೆ ದೂರು ನೀಡಿದ್ದೇನೆ.
— ಬಿ.ರಾಜಕುಮಾರ ಬಸಾಪಟ್ಟಣದ ದೂರುದಾರ
"
ತುಂಗಭದ್ರಾ ಎಡದಂಡೆ ಕಾಲುವೆಗೆ ಕುಡಿವ ಉದ್ದೇಶಕ್ಕಾಗಿ ಜಲಾಶಯದಿಂದ ನೀರು ಹರಿಸಿದ್ದು, ಕೃಷಿ ಬಳಕೆಗಲ್ಲ. ಕಾಲುವೆ ಕೆಳಭಾಗದಲ್ಲಿ ಪೈಪ್‌ಲೈನ್‌ಗಳ ಮೂಲಕ ನೀರು ಪಡೆಯುತ್ತಿರುವುದು ಗಮಕ್ಕಿಲ್ಲ. ನಿಯಂತ್ರಣಕ್ಕೆ ಟಾಸ್ಕ್ ೆರ್ಸ್ ಗಮನಕ್ಕೆ ತರಲಾಗುವುದು.
— ಎಸ್.ಎಂ.ಗೋಡೆಕಲ್ ಇಇ, ಜಲಸಂಪನ್ಮೂಲ ಇಲಾಖೆ, ನಂ.2 ವಿಭಾಗ