- ಹೂಳಿಗೆ ಪರ್ಯಾಯ ನಾಲ್ಕೆದು ಪ್ರಸ್ತಾವನೆ
- ಜಲಶಕ್ತಿ ಸಚಿವರೊಂದಿಗೆ ಸಭೆ
ಕೊಪ್ಪಳ: ತ್ರಿವಳಿ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಹೊಸ ಸ್ಪಿಲ್ವೇ ಗೇಟ್ ಅಳವಡಿಸಿ ಭವಿಷ್ಯ ಭದ್ರಪಡಿಸಲಾಗಿದೆ. ಇದೀಗ ಹೂಳಿಗೆ ಪರ್ಯಾಯ ಚಿಂತನೆ ಚಿಗುರೊಡೆದಿದ್ದು, ರಾಜ್ಯ ಸೇರಿ ಆಂಧ್ರ&ತೆಲಂಗಾಣ ಸಿಎಂಗಳು ಗುರುವಾರ ಮುನಿರಾಬಾದ್ ಐಆರ್ಬಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಜತೆಗೆ ನಡೆದ ಸಭೆಯಲ್ಲಿ ತಮ್ಮ ಪ್ರಸ್ತಾವನೆ ಮಂಡಿಸಿದರು.
ಒಂದೆಡೆ ಗೇಟ್ ಉದ್ಘಾಟನೆ ಮಹತ್ವ ಪಡೆದರೆ, ಮತ್ತೊಂದೆಡೆ ಜಲಾಶಯದಲ್ಲಿ ಆಗುತ್ತಿರುವ ನೀರಿನ ಕೊರತೆ ನೀಗಿಸುವ ಸವಾಲಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಭೆ ನಡೆದಿದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನದಿ ಜೋಡಣೆ ಜತೆಗೆ ಹೂಳು ತೆರವು ಸಲಹೆ ನೀಡಿದ್ದಾರೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ತಮ್ಮ ರಾಜ್ಯಕ್ಕೆ ನೀರಿನ ಕೊರತೆಯಾಗುತ್ತಿದೆ. ಹಂಚಿಕೆಯಲ್ಲೂ ಅನ್ಯಾಯವಾಗಿದೆ. ಅದನ್ನು ಸರಿಪಡಿಸಬೇಕು. ನಮ್ಮ ಪಾಲಿನ ನೀರು ನಮಗೆ ನೀಡಿದಲ್ಲಿ ಕೇಂದ್ರ ಸೂಚಿಸುವ ಸಲಹೆಗೆ ಸಹಮತ ನೀಡುವುದಾಗಿ ಪ್ರತಿಪಾಸಿದ್ದಾರೆ. ಜತೆಗೆ ಉಭಯ ಸಿಎಂಗಳು ತಮ್ಮ ಪಾಲಿನ ನೀರನ್ನು ಜಲಾಶಯದಿಂದ ನೇರ ಆಂಧ್ರಪ್ರದೇಶ ಗಡಿವರೆಗೆ ತೆಗೆದುಕೊಂಡು ಹೋಗಲು ಹಿಂದೆ ರೂಪಿಸಿದ ಯೋಜನೆಯನ್ನು ಮರು ಪ್ರಸ್ತಾಪಿಸಿದರು.
ಇತ್ತ ಸಿಎಂ ಡಿ.ಕೆ.ಶಿವಕುಮಾರ್ ರಾಜ್ಯಕ್ಕೂ ಅನ್ಯಾಯವಾಗುತ್ತಿದ್ದು, ನವಲಿ ಸಮಾನಾಂತರ ಜಲಾಶಯ ನಿರ್ಮಿಸಿದಲ್ಲಿ ಹೂಳಿಗೆ ಪರಿಹಾರ ಕಂಡುಕೊಳ್ಳಬಹುದು. ಪೂರಕವಾಗಿ ಜಲಾಶಯ ಮೇಲ್ಭಾಗ, ಇಲ್ಲವೇ ಕೆಳ ಭಾಗದಲ್ಲಿ ಕಿರು ಜಲಾಶಯ ಅಥವಾ ಚೆಕ್ಡ್ಯಾಂಗಳನ್ನು ನಿರ್ಮಿಸಿ ನಮ್ಮ ಪಾಲಿನ ನೀರು ಬಳಕೆ ಮಾಡಲು ಅವಕಾಶವಿದೆ. ಇದಕ್ಕೆ ನೆರೆ ರಾಜ್ಯಗಳ ಸಹಕಾರ, ಸಮ್ಮತಿ ಅವಶ್ಯವೆಂದು ಪ್ರತಿಪಾಸಿದರು. ಜತೆಗೆ ಜಲಾಶಯದ ಗರಿಷ್ಠ ಮಟ್ಟ 1633 ಅಡಿ ಇದ್ದು, 1635 ಅಡಿವರೆಗೂ ಎರಡೂ ಬದಿಯಲ್ಲಿ ಜಾಗ ಲಭ್ಯವಿದೆ. ಅಲ್ಲಿ ಹೂಳು ಸಂಗ್ರಹಿಸಿ ಗಿಡ ನೆಟ್ಟಲ್ಲಿ ತಕ್ಕಮಟ್ಟಿಗೆ ಪರಿಹಾರ ಕಾಣಬಹುದೆಂದು ಆಶಯ ವ್ಯಕ್ತಪಡಿಸಿದರು.
ಮೂರು ರಾಜ್ಯಗಳ ಹಿತ ಕಾಯಲು ಕೇಂದ್ರ ಬದ್ಧ. ಈ ನಿಟ್ಟಿನಲ್ಲಿ ತಜ್ಞರಿಂದ ವರದಿ ಪಡೆದು ಯೋಗ್ಯ ಪ್ರಸ್ತಾವನೆ ಅನುಮೋದಿಸಿ ಅನುಷ್ಠಾನಗೊಳಿಸಲು ಮೂವರು ಬದ್ಧರಾಗಿರುವಂತೆ ಕೇಂದ್ರ ಪ್ರತಿನಿಧಿ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಮನವಿ ಮಾಡಿದರು. ಪೂರಕ ಪರಿಹಾರ ಕ್ರಮವಾಗಿ ಅನೇಕ ಶಾಸಕರು, ಮಾಜಿ ಶಾಸಕರು, ನೀರಾವರಿ ತಜ್ಞರು ಸಲಹೆ ಹಾಗೂ ಮನವಿ ಸಲ್ಲಿಸಿದರು. ಎಲ್ಲವನ್ನು ಪರಿಶೀಲಿಸಿ ಮೂರು ರಾಜ್ಯಗಳಿಗೆ ಅನುಕೂಲವಾಗುವ ಯೋಜನೆ ಅನುಷ್ಠಾನಕ್ಕೆ ಸಮ್ಮತಿಯಿಂದ ಒಪ್ಪಿದ್ದಾರೆಂದು ಮೂಲಗಳು ತಿಳಿಸಿವೆ.
ವಿಪ ಸಭಾಪತಿ ಬಸವರಾಜ ಹೊರಟ್ಟಿ, ಆಂಧ್ರ ಜಲಸಂಪನ್ಮೂಲ ಸಚಿವ ನಿಮ್ಮಲ ರಾಮನಾಯ್ಡು, ಹಣಕಾಸು ಸಚಿವ ಪಯ್ಯವುಲ ಕೇಶವ್, ತೆಲಂಗಾಣ ಜಲಸಂಪನ್ಮೂಲ ಸಚಿವ ಉತ್ತಮ್ ಕುಮಾರ್ ರೆಡ್ಡಿ, ಸಂಸದರಾದ ರಾಜಶೇಖರ ಹಿಟ್ನಾಳ, ಪ್ರಭಾ ಮಲ್ಲಿಕಾರ್ಜುನ, ಈ.ತುಕಾರಾಮ್, ಮಾಜಿ ಸಚಿವರಾದ ಶಿವರಾಜ ತಂಗಡಗಿ, ಎಚ್.ಕೆ.ಪಾಟೀಲ್, ಎನ್.ಎಸ್.ಬೋಸರಾಜು, ಶಾಸಕರಾದ ಬಸವರಾಜ ರಾಯರಡ್ಡಿ, ರಾವೇಂದ್ರ ಹಿಟ್ನಾಳ, ಹಂಪನಗೌಡ ಬಾದರ್ಲಿ, ವಿಪ ಸದಸ್ಯ ಬಸನಗೌಡ ಬಾದರ್ಲಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಡಿಸಿ, ಎಸ್ಪಿಗಳು, ಇತರ ಅಧಿಕಾರಿಗಳು ಭಾಗಿಯಾಗಿದ್ದರು.