ಕನಕಗಿರಿ ಕೆಪಿಎಸ್ ಪ್ರಾಥಮಿಕ ವಿಭಾಗದಲ್ಲಿ ಎಲ್‌ಕೆಜಿ ಇತರ ತರಗತಿಗಳ ಖಾಲಿ ಸ್ಥಾನಗಳಿಗೆ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಪ್ರಾಚಾರ್ಯ ಅಮರೇಶ ದೇವರಾಳ, ಮುಖ್ಯಶಿಕ್ಷಕ ತುಳಜಾ ನಾಯ್ಕ, ಸಹ ಶಿಕ್ಷಕರಾದ ಜ್ಯೋತಿ ಭತ್ತದ್, ವಿಮಲಾಬಾಯಿ ಇತರರಿದ್ದರು. 
ಕೊಪ್ಪಳ

ಲಾಟರಿ ಮೂಲಕ ಪಾರದರ್ಶಕ ಆಯ್ಕೆ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಅಮರೇಶ ದೇವರಾಳ ಹೇಳಿಕೆ
  • ಖಾಲಿ ಇದ್ದ ಸ್ಥಾನಗಳಿಗೆ ಅರ್ಜಿ
ಕನಕಗಿರಿ: ಕೆಪಿಎಸ್ ಪ್ರಾಥಮಿಕ ವಿಭಾಗದಲ್ಲಿ ಎಲ್‌ಕೆಜಿಯ 60 ಸ್ಥಾನ ಹಾಗೂ ಇತರ ತರಗತಿಗಳಲ್ಲಿ ಖಾಲಿಯಿದ್ದ ಸೀಟುಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡಲು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತಿದೆ ಎಂದು ಪ್ರಾಚಾರ್ಯ ಅಮರೇಶ ದೇವರಾಳ ಹೇಳಿದರು.
ನಗರದ ಕರ್ನಾಟಕ ಪಬ್ಲಿಕ್ ಶಾಲೆಯ ಕಾಲೇಜು ವಿಭಾಗದಲ್ಲಿ ಶನಿವಾರ ನಡೆದ ಲಾಟರಿ ಪ್ರಕ್ರಿಯೆಯಲ್ಲಿ ಮಾತನಾಡಿದರು. ಇಲಾಖೆಯ ನಿಯಮಾನುಸಾರ ಎಲ್‌ಕೆಜಿ ಹಾಗೂ 1ರಿಂದ 8ನೇ ತರಗತಿವರೆಗೆ ಖಾಲಿ ಇದ್ದ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 8ನೇ ತರಗತಿ ಹೊರೆತುಪಡಿಸಿ ಉಳಿದ ತರಗತಿಗಳಿಗೆ ಖಾಲಿ ಸ್ಥಾನಗಳಿಗಿಂತ ಹೆಚ್ಚಿನ ಅರ್ಜಿ ಸಲ್ಲಿಕೆಯಾಗಿವೆ. ಹೀಗಾಗಿ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತಿದೆ ಎಂದರು.
ಎಲ್‌ಕೆಜಿಯ 60 ಸ್ಥಾನಗಳಿಗೆ 81 ಅರ್ಜಿಗಳು ಸಲ್ಲಿಕೆಯಾಗಿದ್ದು, 60 ವಿದ್ಯಾರ್ಥಿಗಳನ್ನು ಅಯ್ಕೆಮಾಡಿಕೊಂಡು ಐವರನ್ನು ಹೆಚ್ಚುವರಿ ಪಟ್ಟಿಯಲ್ಲಿ ಆಯ್ಕೆ ಮಾಡಿ ಕಾಯ್ದಿರಿಸಲಾಗುವುದು. 1ನೇ ತರಗತಿಯ 2 ಸೀಟುಗಳಿಗೆ 28 ಅರ್ಜಿ, 2ನೇ ತರಗತಿಯ 6 ಸ್ಥಾನಗಳಿಗೆ 15, 3ನೇ ತರಗತಿಯ 2 ಸ್ಥಾನಗಳಿಗೆ 15, 4ನೇ ತರಗತಿಯ 3 ಸ್ಥಾನಗಳಿಗೆ 13, 5ನೇ ತರಗತಿಯ 2 ಸ್ಥಾನಗಳಿಗೆ 5, 6ನೇ ತರಗತಿಯ 9 ಸ್ಥಾನಗಳಿಗೆ 19, 7ನೇ ತರಗತಿಯ 1 ಸ್ಥಾನಕ್ಕೆ 2 ಅರ್ಜಿ ಸಲ್ಲಿಕೆಯಾಗಿದ್ದು, ಲಾಟರಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. 8ನೇ ತರಗತಿಯ 8 ಸ್ಥಾನಗಳಿಗೆ ಮೂವರು ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿದ್ದು, ನೇರವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಉಪನ್ಯಾಸಕರಾದ ಪಂಪಾರೆಡ್ಡಿ ಗಚ್ಚಿನಮನಿ, ಶಿವಪುತ್ರಪ್ಪ ಗಳಪೂಜಿ, ಮುಖ್ಯಶಿಕ್ಷಕ ತುಳಜಾ ನಾಯ್ಕ, ಶಿಕ್ಷಕರಾದ ಜ್ಯೋತಿ ಭತ್ತದ್, ವಿಮಲಾಬಾಯಿ, ಪುನಿತಾ, ಬಸವರಾಜ, ಶರಣಯ್ಯ, ಹನುಮೇಶ ಗೌಡ ಇತರರಿದ್ದರು.